ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲಿನ ಅವಹೇಳನಕಾರಿ ನಿಂದನೆ ಖಂಡಿಸಿದ ಶಾಸಕ
ಶಿರಸಿ: ಸಂಸದ ಅನಂತಕುಮಾರ ಹೆಗಡೆಯವರ ವರ್ತನೆ ಜನರಿಗೆ ಗೊತ್ತಿದೆ. ಚುನಾವಣೆ ಎದುರಲ್ಲಿ ಹಿಂದುತ್ವವನ್ನು ನೆನಪುಮಾಡಿಕೊಳ್ಳುವ ಸಂಸದರದ್ದು ಸ್ವಾರ್ಥದ ರಾಜಕೀಯ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಾವೂ ಸಹ ಹಿಂದುಗಳೇ. ದೇಶ ಒಳಿತಾಗಿತಲಿ ಎಂದು ಬಲಿದಾನಗೈದ ಸ್ವಾತಂತ್ರ್ಯ ಹೋರಾಟಗಾರರ ಉದ್ದೇಶಕ್ಕೆ ಯಾವ ಬೆಲೆ ಕೊಟ್ಟಂತಾಗುತ್ತದೆ. ಸೈನಿಕರ ಹೆಸರಿನಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸುಳ್ಳಿನ ಮೇಲೆ ಸರಕಾರ ನಡೆಸುತ್ತಿದೆ ಎಂದರು.
ನಾನು ಎಂದಿಗೂ ಪಕ್ಷದ ಹಿರಿಯರ ಮಾತನ್ನು ದಾಟುವವನಲ್ಲ. ಪಕ್ಷವೇ ಈ ಬಾರಿಯ ಲೋಕಸಭೆಗೆ ಸ್ಪರ್ಧಿಸುವಂತೆ ಸೂಚಿಸಿದರೆ ಅದರ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ. ನಾನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದು ಬಂದಿದ್ದೇನೆ. ನಾನು ರಾಜಕಾರಣಕ್ಕೆ ಬಂದಾಗ ಸಹ ನಾಯಕರ ಆದೇಶಕ್ಕೆ ಅನುಗುಣವಾಗಿ ಕಾರ್ಯ ಮಾಡುತ್ತೇನೆ. ಸಚಿ ಎಚ್ ಕೆ ಪಾಟೀಲ ನೇತೃತ್ವದಲ್ಲಿ ಲೋಕಸಭೆ ಅಭ್ಯರ್ಥಿ ಆಯ್ಕೆ ಕುರಿತು ಹಲವು ಬಾರಿ ಸಭೆ ಈಗಾಗಲೇ ನಡೆದಿದೆ. ಎಐಸಿಸಿ ಮಟ್ಟದಲ್ಲಿ ನಿರ್ಧಾರವಾಗಲಿದ್ದು, ಒಂದೊಮ್ಮೆ ನಾನೇ ಅಭ್ಯರ್ಥಿ ಆಗಬೇಕು ಎಂಬ ಸೂಚನೆ ಬಂದರೆ ಪಕ್ಷದ ಸೂಚನೆಯನ್ನು ಮೀರುವುದಿಲ್ಲ ಎಂದರು.
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದು ನೂರು ದಿನದಲ್ಲಿಯೇ ಘೋಷಿಸಿದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ಬಡವರ ಪರವಾಗಿದೆ. ಸಿದ್ಧರಾಮಯ್ಯನವರ ಕುರಿತಾಗಿ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದರು. ಈ ವೇಳೆ ಪಕ್ಷದ ಎಸ್.ಕೆ. ಭಾಗ್ವತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಜಿಲ್ಲಾ ವಕ್ತಾರ ದೀಪಕ ದೊಡ್ಡೂರು, ಸಂತೋಷ ಶೆಟ್ಟಿ, ಜ್ಯೋತಿ ಪಾಟೀಲ ಇತರರಿದ್ದರು.