ಮುಂಡಗೋಡ: ಯುವಕ ಹಾಗೂ ಯುವತಿಯರು ತಮ್ಮ ಶಕ್ತಿಯ ಅರಿವು ಮಾಡಿಕೊಂಡು ಸಮಾಜದ ಪ್ರಗತಿಗೆ ಸನ್ನದ್ದರಾಗಬೇಕೆಂದು ನ್ಯಾಯಾಧೀಶ ವಿನೋದ ನಾಯ್ಕ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಹಾಗೂ ಗ್ರಂಥಗಳ ಅಧ್ಯಯನ ಮಾಡುವ ಮೂಲಕ ಆತ್ಮವಿಶ್ವಾಸ ವೃದ್ದಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು.
ಉಪನ್ಯಾಸಕರಾಗಿ ಆಗಮಿಸಿದ ವಕೀಲ ಆರ್.ಎಂ. ಮಳಗಿಕರ್ ಮಾತನಾಡಿ, ಸ್ವಾಮಿ ವಿವೇಕಾನಂದ ಅವರ ಜೀವನ ಚರಿತ್ರೆ ಹಾಗೂ ದೃಷ್ಟಾಂತಗಳನ್ನು ವಿವರಿಸಿದರು. ಕಾನೂನು ಸೇವಾ ಪ್ರಾಧಿಕಾರದ ಪರವಾಗಿ ವಕೀಲ ಆರ್. ಹಂಚಿನಮನಿ ಮಾತನಾಡಿ, ಯುವಕರು ಪೋಕ್ಸೊ ಕಾಯ್ದೆ ಹಾಗೂ ಇನ್ನಿತರ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ನಿಯಮ ಶಾಸನಗಳನ್ನು ಅನುಸರಿಸಬೇಕು ಎಂದು ಹೇಳಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಮಧುಶ್ರೀ, ರೋವರ್ಸ್ ಅಧಿಕಾರಿ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.