ಮುಂಡಗೋಡ: ಹೊಸ ವರ್ಷದ ಪ್ರಾರಂಭದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ನಡೆಯುಲಿರುವ ನೂರಾರು ವರ್ಷಗಳ ಇತಿಹಾಸವುಳ್ಳ ಸಾಲಗಾಂವ್ ಬಾಣಂತಿದೇವಿ ಜಾತ್ರಾ ಮಹೋತ್ಸವ ಜ.14 ರಿಂದ 16 ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಜಾತ್ರೆಗೆ ಸಕಲ ಸಿದ್ದತೆಗಳು ನಡೆದಿವತೀವಹುಬ್ಬಳ್ಳಿ ಶಿರಸಿ ಹೆದ್ದಾರಿಯ ಸಾಲಗಾಂವ್ ಗ್ರಾಮದ ಕೆರೆಯ ದಂಡೆಯ ಮೇಲಿರುವ ಬಾಣಂತಿದೇವಿಯು ಸಂತಾನ ಪ್ರಾಪ್ತಿ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ತಾಯಿ ಎಂದೇ ಪ್ರಸ್ತಿದ್ದಿ ಪಡೆದಿದ್ದಾಳೆ. ದೇವಿಯ ಸನ್ನಿಧಿಯಲ್ಲಿ ಹೋಮ, ಹವನ, ಧಾರ್ಮಿಕ ವಿಧಿ ವಿಧಾನಗಳು, ದೇವಿಗೆ ಹಣ್ಣುಕಾಯಿ ಉಡಿ ತುಂಬುವುದು ಹಾಗೂ ಹರಕೆ ತೀರಿಸಲಾಗುತ್ತದೆ. ಜಾತ್ರೆಯಲ್ಲಿ ಸಾಲಗಾಂವ್, ಸುತ್ತಮುತ್ತಲಿನ ಗ್ರಾಮ ಹಾಗೂ ಹೊರ ಜಿಲ್ಲೆಯ ಸಾವಿರಾರು ಭಕ್ತರು ಆಗಮಿಸಿ ಹರಕೆ ತಿರಿಸುವುದು ಕಂಡುಬರುತ್ತದೆ.
ಸಂತಾನ ಭಾಗ್ಯ: ಭಕ್ತರು ಸಂತಾನ ಪ್ರಾಪ್ತಿಯನ್ನು ಬೇಡಿಕೊಳ್ಳುವುದು ಇಲ್ಲಿನ ಪ್ರಾಮುಖ್ಯತೆಯಾಗಿದೆ. ಸಂತಾನ ಭಾಗ್ಯ ಕರುಣಿಸಿದರೆ ಕೆರೆಯಲ್ಲಿ ತೆಪ್ಪ ಪೂಜೆ ನೇರವೆರಿಸುವುದಾಗಿ ಬಾಣಂತಿ ದೇವಿಯನ್ನು ಬೇಡಿಕೊಳ್ಳಲಾಗುತ್ತದೆ. ಅದರಂತೆ ಮಹಿಳೆಯರ ಬೇಡಿಕೆ ಈಡೇರಿದ ನಂತರ ಪೋಷಕರು ಜನಿಸಿದ ಶಿಶುವನ್ನು ಕೆರೆಯಲ್ಲಿ ಜೋಡಿ ಕುಡಿ ಬಾಳೆ ಎಲೆಯಲ್ಲಿ ಮಲಗಿಸಿ ನೀರಿನಲ್ಲಿ ತೇಲಿಸುವ ಮೂಲಕ ಹರಕೆ ತೀರಿಸುತ್ತಾರೆ. ಪ್ರತಿ ವರ್ಷವು ದೇವಿಯ ಆರ್ಶೀವಾದದಿಂದ ಜನಿಸುವ ಮಕ್ಕಳನ್ನು ನೂರಾರು ವರ್ಷಗಳಿಂದ ನಡೆದುಬಂದ ಈ ಸಂಪ್ರದಾಯವನ್ನು ಇಂದಿನವರೆಗೂ ಆಚರಿಸುತ್ತಾ ಬಂದಿರುವುದು ವಿಶೇಷತೆಯಾಗಿದೆ.
ದೇವಾಲಯ ಇತಿಹಾಸ: ಹಲವು ವರ್ಷಗಳ ಹಿಂದೆ ಸಾಲಗಾಂವ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ನೀರಿನ ಅಭಾವ ಉಂಟಾದ ವೇಳೆ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಕೆರೆ ನಿಮಾರ್ಣಕ್ಕೆ ಮುಂದಾಗಿದ್ದರು. ಆದರೆ ಎಷ್ಟೇ ಆಳ ಅಗೆದರೂ ನೀರು ಸಿಗದಿರುವ ಕಾರಣ ಗ್ರಾಮಸ್ಥರು ಹತಾಶರಾಗಿದ್ದರು. ಈ ಸಂದರ್ಭದಲ್ಲಿ ತವರು ಮನೆಗೆ ಬಾಣಂತನಕ್ಕೆ ಬಂದಿದ್ದ ಮಹಿಳೆಯೂ ತನ್ನ ತಂದೆ ಪಾಲ್ಗೊಂಡ ಕೆರೆ ನಿರ್ಮಾಣ ಕಾರ‍್ಯವನ್ನು ವೀಕ್ಷಿಸಲು ಕೆರೆಯ ದಂಡೆಯ ಮೇಲೆ ಬರುತ್ತಿದ್ದಂತೆ ಒಮ್ಮಿಂದೊಮ್ಮೆಲೆ ಕೆರೆಯಲ್ಲಿ ನೀರು ಉಕ್ಕಿ ಬಾಣಂತಿ ಮಗಳನ್ನು ಬಲಿ ತೆಗೆದುಕೊಂಡಿತು ಎಂಬ ಇತಿಹಾಸವಿದೆ. ಈ ಹಿನ್ನಲೆಯಲ್ಲಿ ಅಂದಿನಿಂದ ಈ ಕೆರೆಯು ಬಾಣಂತಿದೇವಿ ಕೆರೆ ಎಂದು ಪ್ರಸಿದ್ದಿ ಪಡೆಯಿತು ಎಂಬುದು ಪ್ರತೀತಿಯಾಗಿದ್ದು, ಮಕ್ಕಳಿಲ್ಲದವರು ಬಾಣಂತಿದೇವಿಗೆ ಹರಕೆ ಹೊತ್ತವರಿಗೆ ಮಕ್ಕಳಾಗುತ್ತಿರುವುದರಿಂದ ಭಕ್ತರು ಸಂಪ್ರದಾಯವನ್ನು ಈವರೆಗೂ ಆಚರಣೆ ಮಾಡಲಾಗುತ್ತಿದೆ.
ಹರಕೆ ಹೇಳಿಕೆ : ಪ್ರತಿ ವರ್ಷವು ವಿಜೃಂಭಣೆಯಿಂದ ನಡೆಯುವ ಬಾಣಂತಿದೇವಿ ಜಾತ್ರೆಯಲ್ಲಿ ಸಂತಾನ ಪ್ರಾಪ್ತಿ ಹರಕೆ ಹೊತ್ತ ಮಹಿಳೆಯರು ಜನಿಸಿದ ಶಿಶುವನ್ನು ಕೆರೆಯಲ್ಲಿ ಜೋಡಿ ಕುಡಿ ಬಾಳೆ ಎಲೆಯಲ್ಲಿ ಮಲಗಿಸಿ ನೀರಿನಲ್ಲಿ ತೇಲಿಸುವ ಮೂಲಕ ಹರಕೆ ತೀರಿಸುವುದು ಇಲ್ಲಿನ ಪದ್ದತಿ ಇಂದಿಗೂ ಮುಂದುವರೆದಿದ್ದು ವಿಶೇಷತೆಯಾಗಿದೆ.