ದಾಂಡೇಲಿ: ದಾಂಡೇಲಿ – ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಬರುವ ತಾಟಗೇರಾ ಸಮೀಪ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದು, ಹಿಂಬದಿ ಸವಾರಳಿಗೆ ಗಾಯವಾದ ಘಟನೆ ಶುಕ್ರವಾರ ನಡೆದಿದೆ.
ಚಿಬ್ಬಲಗೇರಿ ನಿವಾಸಿ ವಿಜಯ ಗೋಪಾಲ್ ಮಿರಾಶಿ ಅವರು ತನ್ನ ಸಹೋದರಿ ಕಲಘಟಗಿ ತಾಲೂಕಿನ ಸುಳ್ಳಿಗಟ್ಟಿ ಗ್ರಾಮದ ನಿವಾಸಿ ಮಹಾದೇವಿ ಈರಣ್ಣ ಕೊಳಂಬಿ ಜೊತೆ ತನ್ನ ದ್ವಿಚಕ್ರ ವಾಹನದಲ್ಲಿ ದಾಂಡೇಲಿಯಿಂದ ಹಳಿಯಾಳಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ತಾಟಗೇರಾದ ಹತ್ತಿರ ಸ್ಕಿಡ್ ಆಗಿ ಬಿದ್ದು ಹಿಂಬದಿಯಲ್ಲಿದ್ದ ಮಹಾದೇವಿ ಈರಣ್ಣ ಕೊಳಂಬಿ ಅವರಿಗೆ ಗಾಯವಾಗಿದೆ.
ಗಾಯಗೊಂಡ ಮಹಾದೇವಿ ಈರಣ್ಣ ಕೊಳಂಬಿ ಅವರನ್ನು ತಕ್ಷಣವೇ 112 ಸಹಾಯವಾಣಿಯ ಸಹಕಾರದಲ್ಲಿ 108 ಆಂಬುಲೆನ್ಸ್ ವಾಹನದ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ. ಘಟನಾ ಸ್ಥಳಕ್ಕೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಎಎಸೈ ವೆಂಕಟೇಶ್ ತೆಗ್ಗಿನ್ ಹಾಗೂ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.