ಅಂಕೋಲಾ: ಹೆಗ್ಗಾರ ಗುಳ್ಳಾಪುರ ಸೇತುವೆ ಪುನರ್ ನಿರ್ಮಾಣಕ್ಕೆ ಸ್ಫೂರ್ತಿ ದೊರೆತಂತಾಗಿದ್ದು, ಲೋಕೋಪಯೋಗಿ ಇಲಾಖೆ ಧಾರವಾಡದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಮುಖ್ಯ ಅಭಿಯಂತರರು ಸಂಪೂರ್ಣ ಕೊಚ್ಚಿ ಹೋಗಿರುವ ಸೇತುವೆಯ ಸ್ಥಳ ಪರಿಶೀಲಿಸಿದರು.
ಗುಳ್ಳಾಪುರ ಹೆಗ್ಗಾರ ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿ ಹೆಗ್ಗಾರರವರು ಈ ಸೇತುವೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ರವರಿಗೆ ಮನವಿ ಅರ್ಪಿಸಿದ್ದರು. ಶಾಸಕ ಸೈಲ್ ವಿಶೇಷ ಕಾಳಜಿ ವಹಿಸಿ ಈ ಸೇತುವೆ ನಿರ್ಮಾಣ ಅಗತ್ಯವಾಗಿದ್ದು ಈ ಸೇತುವೆಯಿಂದ ಸಹಸ್ರಾರು ಕುಟುಂಬಗಳಿಗೆ ಸಹಾಯವಾಗುತ್ತದೆ ಎಂದು ಅಧಿಕಾರಿಗಳನ್ನು ಪರಿಶೀಲನೆಗೆ ಕಳುಹಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳು, ಸ್ಥಳೀಯರು ಹಾಗೂ ಸಮಿತಿಯ ಉಪಾಧ್ಯಕ್ಷ ಪಿ ವಿ ಕಲಗಾರೆ, ಕಾರ್ಯದರ್ಶಿ ಜಯಪ್ರಕಾಶ ಗಾಂವಕರ, ಜಿ.ಆರ್ ಭಟ್ ಸೇರಿದಂತೆ ಇತರರು ಸೇತುವೆ ಗೆ ಸಂಬಂಧಿಸಿದ ಮಾಹಿತಿ ಪೂರೈಸಿದರು.
ನಮಗೆ ಈ ಸೇತುವೆ ಆದಷ್ಟು ಶೀಘ್ರವಾಗಿ ಆಗಬೇಕಿದೆ. ಸೇತುವೆ ಕುಸಿದ ಸ್ಥಳಕ್ಕೆ ರಾಜ್ಯ ನಾಯಕರು ಸೇರಿದಂತೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರಿಗೆ ಅತಿ ಅವಶ್ಯವಿರುವ ಸೇತುವೆ ಆದಷ್ಟು ಶೀಘ್ರವಾಗಿ ನಿರ್ಮಾಣವಾಗಲಿ ಎಂಬುದು ಗ್ರಾಮಸ್ಥರ ಆಶಯ.– ಜಿ.ಆರ್. ಭಟ್ ಗುಳ್ಳಾಪುರ