ಬನವಾಸಿ: ಇಲ್ಲಿನ ಅಜ್ಜರಣಿ ರಸ್ತೆಯಲ್ಲಿರುವ ಶ್ರೀ ತತ್ವಮಸಿ ಅಯ್ಯಪ್ಪ ಸೇವಾ ಸನ್ನಿಧಿಯ ವಾರ್ಷಿಕ ಮಹಾಪೂಜಾ ಹಾಗೂ ಅನ್ನ ಸಂತರ್ಪಣೆ, ಕೆಂಡ ಸೇವೆ ಹಾಗೂ ಅಪ್ಪಂ ಸೇವಾ ಕಾರ್ಯಕ್ರಮ ಸೋಮವಾರ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ನೆರವೇರಿತು.
ಮುಂಜಾನೆ ಗಣಹೋಮದೊಂದಿಗೆ ಪೂಜಾ ಕಾರ್ಯಕ್ರಮ ಆರಂಭವಾಯಿತು. ಮಧ್ಯಾಹ್ನ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಷೇಶ ಅಲಂಕಾರ, ಅಭಿಷೇಕ ನಡೆಸಿ ಮಹಾಪೂಜೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಮೆರೆದರು. ಸಾವಿರಾರು ಜನ ಭಕ್ತರಿಗೆ ಅನ್ನಸಂತರ್ಪಣೆ ಜರುಗಿತು.
ರಾತ್ರಿ ಶಿವರಾಜ ಆಚಾರ್ಯ ಗುರುಸ್ವಾಮಿಯವರ 18ನೇ ವರ್ಷದ ಶಬರಿಮಲೆ ಯಾತ್ರೆಯ ನಿಮಿತ್ತವಾಗಿ ಗುರು ವಂದನಾ ಕಾರ್ಯಕ್ರಮ ನಡೆಯಿತು. ಗುರುಸ್ವಾಮಿಗಳಾದ ಶಿರಸಿ ಅಯ್ಯಪ್ಪನಗರದ ಸಂದೀಪ್ ಶಿರ್ಸಿಕರ, ಚಿಕ್ಕಮಗಳೂರಿನ ರಾಜು ನಾಯರ್, ವಡ್ಡಿನಕೊಪ್ಪ ಬಸವಣ್ಣೆಪ್ಪ ಜೋಗಿ, ಮಳಗಿಯ ವೆಂಕಟೇಶ, ಬನವಾಸಿಯ ಪರಶುರಾಮ ಜೋಗಿ, ಪಾಂಡುರಂಗ ಜೋಗಿ, ಲಕ್ಷ್ಮಣ ಯಡೂರಬೈಲ್, ಗುರುಮೂರ್ತಿ ಮೇಸ್ತ್ರಿ, ಸಚೀನ್ ಸಾಲಿ ಹಾಗೂ ಇನ್ನಿತರ ಸ್ವಾಮಿಗಳನ್ನು ಸತ್ಕಾರಿಸಲಾಯಿತು. ಪೂಜಾ ಮಹೋತ್ಸವದ ಅಂಗವಾಗಿ ಝೀ ಕನ್ನಡ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಹಾಗೂ ಗಾಯಕ ಮಂಜುನಾಥ ಆಚಾರ್ಯ, ಚೇತನಾ ನಾಯ್ಕ್ ಅವರಿಂದ ಭಕ್ತಿ ಲಹರಿ ಹಾಗೂ ಶಿರಸಿಯ ಯಕ್ಷಗಾನ ಕಲಾವಿದೆ ಕು.ತುಳಸಿ ಬೆಟ್ಟಕೊಪ್ಪ ಅವರಿಂದ ಯಕ್ಷಗಾನ ಜರುಗಿತು. ನಂತರದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಂದ ಕೆಂಡ ಸೇವೆ ಮತ್ತು ಕುದಿಯುವ ಎಣ್ಣೆಯಿಂದ ವಡ ತೆಗೆಯುವ ಅಪ್ಪಂ ಸೇವೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಅಯ್ಯಪ್ಪ ಮಾಲಾಧಾರಿಗಳು ಪಾಲ್ಗೊಂಡಿದ್ದರು.
ಶ್ರೀ ತತ್ವಮಸಿ ಅಯ್ಯಪ್ಪ ಸೇವಾ ಸನ್ನಿಧಿಯ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಇಲ್ಲಿನ ಜನತಾ ಕಾಲೋನಿಯ ಸಿದ್ದಿ ವಿನಾಯಕ ದೇವಸ್ಥಾನದಿಂದ ಶ್ರೀ ತತ್ವಮಸಿ ಅಯ್ಯಪ್ಪ ಸೇವಾ ಸನ್ನಿಧಿಯವರೆಗೆ ಕುಂಭ ಹಾಗೂ ಅಯ್ಯಪ್ಪ ಸ್ವಾಮಿಯ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಶ್ರೀ ಸದ್ಗುರು ಚಂಡೆ ಮದ್ದಲೆ ತಂಡ ಮೆರವಣಿಗೆಗೆ ಮೆರಗು ನೀಡಿತು. ಪುಟಾಣಿ ಮಕ್ಕಳಿಂದ ಹರಿ,ಹರ ಹಾಗೂ ಮಣಿಕಂಠರ ಎಲ್ಲರ ಆಕರ್ಷಣೆಯಾಗಿತ್ತು. ಸಾವಿರಾರು ಶ್ರೀ ಅಯ್ಯಪ್ಪ ಮಾಲಾಧಾರಿಗಳು ಶರಣುಘೋಷ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.