ಶಿರಸಿ: ತಾಲೂಕಿನ ಹುಲೇಕಲ್ಲಿನ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2023-24 ನೇ ಶೈಕ್ಷಣಿಕ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನವು ಡಿ.31ರಂದು ಸಡಗರದಿಂದ ನಡೆಯಿತು. ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮವು ಜ್ಯೋತಿ ಬೆಳಗುವುದರೊಂದಿಗೆ ಪ್ರಾರಂಭಗೊಂಡಿತು.
ಕಾರ್ಯಕ್ರಮದಲ್ಲಿ 2022-23 ನೇ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದು ಸಂಸ್ಥೆಗೆ ಕೀರ್ತಿತಂದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ದತ್ತಿನಿಧಿ ಬಹುಮಾನ ಹಾಗೂ ಈ ವರ್ಷ 2023-24 ನೇ ಸಾಲಿನಲ್ಲಿ ಕಲಿಯುತ್ತಿರುವ 8 ನೇ, 9 ನೇ, 10 ನೇ ವರ್ಗ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಲಾಯಿತು. ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಮುಖ್ಯ ಆಮಂತ್ರಿತರಾಗಿ ಆಗಮಿಸಿದ ‘ವಿಸ್ತಾರ ಟಿ.ವಿ’ ಮುಖ್ಯಸ್ಥ, ವಿಶ್ವದರ್ಶನ ಶಿಕ್ಷಣ ಸಮೂಹ ಅಧ್ಯಕ್ಷ ಹರಿಪ್ರಕಾಶ, ಕೋಣೆಮನೆ ತಮ್ಮ ನುಡಿಯಲ್ಲಿ, ಭಾರತೀಯ ಶಿಕ್ಷಣ ಪದ್ಧತಿಯ ಮಹತ್ವ, ವಿಶ್ವಕ್ಕೆ ಭಾರತದ ಕೊಡುಗೆ, ಪ್ರಸ್ತುತ ವಿಶ್ವದಲ್ಲಿ ಭಾರತದ ಸ್ಥಾನಮಾನ ಈ ಕುರಿತು ಮಾತನಾಡುತ್ತಾ, ವಿಶ್ವದ ಶ್ರೇಷ್ಠ ಮಾಧ್ಯಮಗಳ & ಸಂಸ್ಥೆಗಳ ನಾಯಕತ್ವ ಪಡೆದ ಭಾರತೀಯರ ಸಾಧನೆಯನ್ನು ತಿಳಿಸಿದರು. ಭಾರತ ತನ್ನ ಶೇಷ್ಠತೆ ಮತ್ತು ಪ್ರಸ್ತುತ ಯುವಕರ ಸ್ವಯಂ ಉದ್ಯೋಗ –ರಚನೆ ಮತ್ತು ಸಹಭಾಗಿತ್ವದ ಕುರಿತು ವಿವರಿಸುತ್ತಾ, ಮುಂದಿನ ಪಿಳಿಗೆಯವರ ಶೈಕ್ಷಣಿಕ ತಯಾರಿ, ಉದ್ಯೋಗ ಪಡೆದುಕೊಳ್ಳುವ ಕುರಿತು ಸಿದ್ಧವಾಗಬೇಕಾದ ಮಾದರಿ ಹಾಗೂ ಈ ಯೋಜನೆ-ಯೋಚನೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಹೊಣಗಾರಿಕೆಯ ಕುರಿತು ಸುಂದರವಾದ ಪರಿಕಲ್ಪನೆಯನ್ನು ತೆರೆದಿಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಸಾನ್ನಿಧ್ಯ ವಹಿಸಿದ್ದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ವಿದ್ಯಾರ್ಥಿಗಳಿಂದ ಸಿದ್ಧವಾದ ಕೈಬರಹ ಪತ್ರಿಕೆಗಳಾದ ಸ್ವರ್ಣದೀಪಿಕಾ, ಅರುಣೋದಯ, ವಿಜ್ಞಾನತರಂಗ ಮತ್ತು ನೆನಪುಗಳು ಇವುಗಳನ್ನು ಲೋಕಾರ್ಪಣೆಗೊಳಿಸಿದರು. ವಿದ್ಯಾರ್ಥಿಗಳ ಕಾವ್ಯಸಂಕಲನಗಳ ಪುಸ್ತಕ ‘ಅಂಕುರ’ ಮತ್ತು ತೋಟಗಾರಿಕಾ ಶಿಕ್ಷಕಿಯಾದ ಶ್ರೀಮತಿ ಸೀಮಾ ಹೆಗಡೆಯವರು ಬರೆದಿರುವ ‘ತೋಟಗಾರಿಕೆ’ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳಿಗೆ ಆಶೀರ್ವದಿಸಿ ನಡತೆಯೇ ಶಿಕ್ಷಣ, ಜೀವನದಲ್ಲಿ ಭಗವದ್ಗೀತೆಯ ಮಹತ್ವ, ಶೀಲವೇ ಶಿಕ್ಷಣ ಎನ್ನುತ್ತಾ ಹನಿ-ನೀರು ಸೇವಿಸಿದ ತೆಂಗಿನ ಗಿಡ ತನ್ನ ಬದುಕಿನ ಪರ್ಯಂತ ಅಮೃತ ಸದೃಶವಾದ ಎಳನೀರು ಹಾಗೂ ಫಲವನ್ನು ಕೊಡುತ್ತ ಉಪಕಾರಸ್ಮರಣೆಯನ್ನು ಪ್ರಪಂಚಕ್ಕೆ ತೀರಿಸುತ್ತದೆ. ಹಾಗೆಯೇ ವಿದ್ಯಾರ್ಥಿಗಳು ತಂದೆಯ, ತಾಯಿಯ, ಗುರುಗಳ ಋಣವನ್ನು ತೀರಿಸಬೇಕು ಎಂದರು. ಎಲ್ಲಾ ವಿದ್ಯಾರ್ಥಿಗಳು, ನಾಗರೀಕರು ಪರಿಸರ ಸ್ನೇಹಿ ಬದುಕನ್ನ ನಡೆಸಬೇಕಾದ ಮಹತ್ವದ ಕುರಿತು ವಿವರಿಸುತ್ತಾ, ಇಂದು ನಮ್ಮ ಜೀವನದ ಆಹಾರದಲ್ಲಿ, ಶಿಕ್ಷಣದಲ್ಲಿ, ಗೃಹನಿರ್ಮಾಣದಲ್ಲಿ ಮತ್ತು ಬೆಳೆಗಳನ್ನ ಬೆಳೆಯುವಲ್ಲಿ ಸುಸ್ಥಿರವಾದ ಮತ್ತು ಪರಿಸರ ಸ್ನೇಹಿ ಪ್ರಯತ್ನಗಳು ಇಲ್ಲದೇ ಇರುವುದು ನೋವಿನ ಸಂಗತಿಯಾಗಿದೆ. ಭಾರತದ ಪ್ರಾಚೀನ ಬದುಕಿನಲ್ಲಿ ಈ ಸಂಗತಿಗಳೆಲ್ಲವೂ ಅದು ಹೇಗೋ ಕೂಡಿಕೊಂಡಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಎಂ.ಎನ್.ಹೆಗಡೆ ಇವರು ಸ್ವಾಗತಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸಂಗೀತ ಶಿಕ್ಷಕಿ ಶ್ರೀಮತಿ ಸುಮಾ ಹೆಗಡೆ ನಿರ್ದೇಶನದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥನೆ ನಡೆಸಿಕೊಟ್ಟರು. ಪ್ರಾಚಾರ್ಯರಾದ ಡಿ. ಆರ್. ಹೆಗಡೆ ವರದಿ ವಾಚನ ಮಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಎಂ. ಎಸ್. ಹೆಗಡೆ ಇಟಗುಳಿ, ಕಾರ್ಯದರ್ಶಿಗಳಾದ ಶಾಂತಾರಾಮ ಹೆಗಡೆ, ಹೋಸ್ತೋಟ ಇವರುಗಳು ಉಪಸ್ಥಿತರಿದ್ದರು. ಜಿ.ಯು. ಹೆಗಡೆ ಸರ್ವರನ್ನು ವಂದಿಸಿದರು.ಎ.ಎಸ್. ನಾಯ್ಕ ಕಾರ್ಯಕ್ರಮದ ನಿರ್ವಹಣೆ ಮಾಡಿದರು.