ಹೊನ್ನಾವರ: ಹೊನ್ನಾವರದ ಎಸ್.ಡಿ.ಎಮ್.ಕಾಲೇಜ್, ಸರಕಾರಿ ಪಿ.ಯು ಕಾಲೇಜ್ ಮತ್ತು ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಎನ್.ಸಿ.ಸಿ. ಮಕ್ಕಳಿಗೆ ಹೊನ್ನಾವರದ ವಿದ್ಯಾ ನಾಯ್ಕ್ ತಂಡ ಕರಾಟೆ ತರಬೇತಿಯನ್ನು ಶುಕ್ರವಾರ ನೀಡಿದರು.
ತಾಲೂಕಿನ ರಾಯಲ್ ಕೇರಿಯ ನಿವಾಸಿಗಳಾದ ಮಾರುತಿ ನಾಯ್ಕ, ಸುನಂದಾ ನಾಯ್ಕ ಮಗಳಾದ ವಿದ್ಯಾ ನಾಯ್ಕ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೊನ್ನಾವರದ ಸಂತ ತೋಮಸ್ ಶಾಲೆಯಲ್ಲಿ ಮುಗಿಸಿ ನಂತರ ಕಾಲೇಜಿನ ವಿದ್ಯಾಭ್ಯಾಸವನ್ನು ಹೊನ್ನಾವರದ ಎಸ್ ಡಿ ಎಮ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.
ಮದುವೆಯ ನಂತರ ಪ್ರಸ್ತುತ ಗೋವಾದಲ್ಲಿ ವಾಸವಿರುವ ವಿದ್ಯಾ ನಾಯ್ಕ್ ಸಾಧನೆ ಅಪಾರ. ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಹಲವಾರು ವೇದಿಕೆಯಲ್ಲಿ ಸನ್ಮಾನ ಗೌರವ ಪ್ರಶಸ್ತಿ ಪಡೆದು ಹೊನ್ನಾವರದ ಹೆಸರನ್ನು ದೇಶ ವಿದೇಶಗಳಲ್ಲಿ ಪರಿಚಯಿಸುತ್ತಿದ್ದಾರೆ. ಓರ್ವ ಹೆಣ್ಣು ಮಗಳು ಮನಸ್ಸು ಮಾಡಿದರೆ ಏನಾದರೂ ಸಾಧಿಸಬಲ್ಲಳು ಎನ್ನುವುದಕ್ಕೆ ವಿದ್ಯಾ ನಾಯ್ಕ್ ಸಾಕ್ಷಿಯಾಗಿದ್ದಾರೆ. ತಮ್ಮ ಕಠಿಣ ಪರಿಶ್ರಮದಿಂದ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಆಗಿ ಯೋಗದಲ್ಲಿ ಪರಿಣಿತ ಶಿಕ್ಷಕಿಯಾಗಿ ಸೈ ಎನಿಸಿಕೊಂಡವರು. ಇದರ ಜೊತೆಯಲ್ಲಿ ಇವರು Mrs Photogenic, Mrs best ramp walk, Mrs beautifull skin ಇಂತಹ ಹಲವಾರು ಅವಾರ್ಡ್ ಗಳನ್ನು ಪಡೆದಿದ್ದಾರೆ
ತಾಯಿಯ ಆದರ್ಶ ಗುಣಗಳನ್ನು ಅಳವಡಿಸಿಕೊಂಡಿರುವ ಅವರ ಮಗಳು ಕುಮಾರಿ ಸ್ವಸ್ತಿಕಾ ನಾಯ್ಕ್ ಮನೆಯೇ ಮೊದಲ ಪಾಠಶಾಲೆ ಎಂಬಂತೆ ತನ್ನ ತಾಯಿಯಿಂದ ಕರಾಟೆ ತರಬೇತಿ ಪಡೆದು ಬ್ರೌನ್ ಬೆಲ್ಟ್ ಆಗಿ ಹೊರ ಹೊಮ್ಮಿರುವುದು ವಿಶೇಷವಾಗಿದೆ. ವಿದ್ಯಾ ನಾಯ್ಕ ತಾನು ಕಲಿತಿರುವ ವಿದ್ಯೆಯನ್ನು ಇನ್ನೊಬ್ಬರಿಗೆ ಸಹಾಯವಾಗಲಿ ಎಂದು ಸರಿ ಸುಮಾರು ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಹೆಣ್ಣು ಮಕ್ಕಳಿಗೆ ಮಾರ್ಷಲ್ ಆರ್ಟ್ಸ್, ಕರಾಟೆ, ಸೆಲ್ಫ್ ಡಿಫೆನ್ಸ್, ಹಾಗೂ ಹೆಣ್ಣು ಮಕ್ಕಳು ಕೆಲವು ಸಂದರ್ಭಗಳಲ್ಲಿ ತಮ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕೆಂದು ಸೆಮಿನಾರ್ ಮೂಲಕ ತರಬೇತಿ ನೀಡುತ್ತಾ ಬಂದಿದ್ದಾರೆ. ಅಂತೆಯೇ ತನ್ನ ಊರಿನ ಹೆಣ್ಣು ಮಕ್ಕಳಿಗೆ ತರಬೇತಿ ನೀಡಬೇಕೆಂದು ಗೋವಾದಿಂದ ತನ್ನ ತಂಡವನ್ನು ಹೊನ್ನಾವರಕ್ಕೆ ಕರೆತಂದು ತರಬೇತಿ ನೀಡಿದ್ದಾರೆ. ಇವರ ಆದರ್ಶ ನಡೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹೊನ್ನಾವರದ ಜನ ಆಶಿಸಿದ್ದಾರೆ.