ಅಂಕೋಲಾ : ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಅಡಿಯಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಗರ ಹಿರಿಯ ಮತ್ತು ನಗರ ಕಿರಿಯರ ಎರಡು ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಕೇಣಿಯ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದು ಕೊಪ್ಪಳದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ.
ಕುಮಾರಿ ಅಕ್ಷರಾ ಅರುಣ ಮಹಾಲೆ ಮತ್ತು ಜನ್ಮಿತಾ ಕಾಶಿನಾಥ ಹರಿಕಾಂತ ಇವರು ವಿಜ್ಞಾನ ಶಿಕ್ಷಕರಾದ ಸುಧೀರ ದೇವಣ್ಣ ನಾಯಕ ಇವರ ಮಾರ್ಗದರ್ಶನದಲ್ಲಿ “ಜೀವ ವೈವಿಧ್ಯ ಸಂರಕ್ಷಣೆಯ ದೃಷ್ಟಿಯಲ್ಲಿ ಕಗ್ಗ ಭತ್ತದ ತಳಿ ಸಂರಕ್ಷಣೆ ಅನಿವಾರ್ಯ” ಎಂಬ ಸಂಶೋಧನಾ ಪ್ರಬಂಧ ಸಿದ್ದಪಡಿಸಿದ್ದರು. ಇವರು ಅಂಕೋಲೆಯಲ್ಲಿ ಕಣ್ಮರೆಯಾಗುತ್ತಿರುವ ಕಗ್ಗ ಭತ್ತದ ತಳಿಗೆ ಮರುಜೀವ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಂಡಿದ್ದರು. ಕುಮಟಾದಿಂದ ಖಗ್ಗ ಭತ್ತದ ಬೀಜ ತಂದು ಬೆಳೆದು ಅಳಿವಿನಂಚಿನಲ್ಲಿರುವ ಖಗ್ಗದ ಭತ್ತಕ್ಕೆ ಮರುಜೀವ ನೀಡುವ ಇವರ ಪ್ರಯತ್ನ ವಿಜ್ಞಾನಿಗಳಿಂದ ಶ್ಲಾಘನೆಗೆ ಒಳಗಾಗಿದೆ. ಇದೇ ಪ್ರೌಢಶಾಲೆಯ ನಾಗಮಣಿ ನಾಗರಾಜ ನಾಯ್ಕ ಮತ್ತು ಅಂಕಿತಾ ಹನುಮಂತ ನಾಯ್ಕ ಇವರು ಸಿದ್ದಪಡಿಸಿದ “ತಳಿಸಂರಕ್ಷಕ ನಾಗರಾಜ ನಾಯ್ಕ” ಎಂಬ ವೈಜ್ಞಾನಿಕ ಪ್ರಬಂಧವು ನಗರ ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶಿ ಶಿಕ್ಷಕರಾದ ಸುಧೀರ ನಾಯಕ ಅವರನ್ನು ಮುಖ್ಯ ಶಿಕ್ಷಕರಾದ ಚಂದ್ರಕಾಂತ ಗಾಂವಕರ, ಶಾಲಾ ಶಿಕ್ಷಕರು, ಸಿಬ್ಬಂದಿವರ್ಗ ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂಧಿಸಿದ್ದಾರೆ.