ದಾಂಡೇಲಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಾಂಡೇಲಿ ತಾಲೂಕು, ಕೋಗಿಲಬನ ವಲಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಡಿ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೋಗಿಲಬನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ನರಗುಂದದಲ್ಲಿರುವ ಶಿವಾನಂದಮಠದ ಸ್ವಾಮೀಜಿಯವರಾದ ಪೂಜ್ಯ.ಶ್ರೀ.ಡಾ.ಬಸವನಂದ ಮಹಾಸ್ವಾಮಿಗಳು ಧಾರ್ಮಿಕ ಶ್ರದ್ಧೆ ಇದ್ದಲ್ಲಿ, ಪರಸ್ಪರ ನಂಬಿಕೆ ಸೌಹಾರ್ದತೆ ಇರಲು ಸಾಧ್ಯವಾಗುವುದರ ಜೊತೆಗೆ ಆದರ್ಶ ಸಮಾಜ ನಿರ್ಮಾಣವೂ ಸಾಧ್ಯ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಆರೋಗ್ಯ ಹೀಗೆ ನಾನಾ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುವುದರ ಮೂಲಕ ಸದೃಢ ರಾಷ್ಟ್ರ ನಿರ್ಮಾಣದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ. ನಿಸ್ವಾರ್ಥ ಮನಸ್ಸು ಮತ್ತು ಸೇವಾ ಮನೋಭಾವನೆಯನ್ನು ಮೈ ಗೂಡಿಸಿಕೊಳ್ಳಲು ಇಂತಹ ಕಾರ್ಯಕ್ರಮ ಸ್ಪೂರ್ತಿದಾಯಕವಾಗಿದೆ ಎಂದರು.
ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿಯವರು ಉದ್ಘಾಟಿಸಿ ಮಾತನಾಡುತ್ತಾ, ಭಗವಂತನಿಗೆ ಬಡವ ಶ್ರೀಮಂತ ಎಂಬ ಭೇದಭಾವವಿಲ್ಲ. ಭಗವಂತನಿಗೆ ಎಲ್ಲರೂ ಭಕ್ತರೆ ಆಗಿದ್ದಾರೆ. ಪರಸ್ಪರ ಸೌಹಾರ್ದತೆಯನ್ನು ಬೆಸೆಯುವ ನಿಟ್ಟಿನಲ್ಲಿ ಇಂತಹ ಪೂಜಾ ಕಾರ್ಯಕ್ರಮಗಳು ಮಹತ್ವಪೂರ್ಣವಾದ ಪಾತ್ರವನ್ನು ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾಂಡೇಲಿ ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ಬೆಳಗಾವಿಯ ಡಾ.ವೈಶಾಲಿ ಕಿತ್ತೂರು ಸಂದರ್ಬೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿಯ ಸದಸ್ಯರಾದ ಚನ್ನಬಸಪ್ಪ ಮುರುಗೋಡ ಪರಸ್ಪರ ಒಂದಾಗಿ ಧಾರ್ಮಿಕ ಆಚರಣೆಗಳನ್ನು ಮಾಡಿದಾಗ ಶಾಂತಿ ಸೌಹಾರ್ಧತೆ ಮತ್ತಷ್ಟು ಸದೃಢಗೊಳ್ಳಲು ಸಾಧ್ಯವಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀಕಾಂತ್ ನಾಯ್ಕ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಮೇಲ್ವಿಚಾರಕರುಗಳಾದ ರಾಜ್ ವಂದಿಸಿದರು. ಜಯಕರ್ ಕಾರ್ಯಕ್ರಮವನ್ನು ನಿರೂಪಿಸಿದರು.