ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಬೈಲ್ ಗ್ರಾಮದ ಸಭಾಭವನದಲ್ಲಿ ಸೀತಾರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಿಂದ ರೈತರ ದಿನಾಚರಣೆಯನ್ನು ಆಚರಿಸಲಾಯಿತು.
ತಾ.ಪಂ ಕಾರ್ಯನಿರ್ವಾಹಕ ಜಗದೀಶ್ ಎಸ್. ಕಮ್ಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾವಯವ ಕೃಷಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಕರೆ ನೀಡಿದರು. ಸಹಾಯಕ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾದ ಕೀರ್ತಿ ಇಲಾಖೆಯ ಯೋಜನೆ ಕುರಿತು ಮಾತನಾಡಿ ಪೌಷ್ಟಿಕ ಕೈ ತೋಟ ನಿರ್ಮಾಣ ಮಾಡುವ ವಿಧಾನದ ಬಗ್ಗೆ ತಿಳಿಸಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ಶಿಕ್ಷಕಿ ಶಿವಲೀಲಾ, ಜಿ.ಆರ್. ಭಟ್ ಗುಳ್ಳಾಪುರ ಕೃಷಿಯ ಬಗ್ಗೆ ಮಾತನಾಡಿದರು. ಇಡಗುಂದಿ ಗ್ರಾ.ಪಂ ಪಿಡಿಓ ಚನ್ನವೀರಪ್ಪ ಕುಂಬಾರ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಕೃಷಿಯಲ್ಲಿ ತೊಡಗಿರುವ ರೈತ ಮಹಿಳೆಯರಾದ ಪ್ರೇಮಾ ಜೋಶಿ, ರಾಜೇಶ್ವರಿ ಸಿದ್ದಿ, ಸಂದ್ಯಾ ಭಟ್, ನೇತ್ರಾವತಿ ದೇವಳಿ, ದಿವ್ಯಾ ಬಾಂದೇಕರ್ ರಿಗೆ ಸನ್ಮಾನಿಸಲಾಯಿತು.
ವಿವಿಧ ಧಾನ್ಯಗಳಿಂದ ರಂಗೋಲಿ ಬಿಡಿಸಿ ಮಹಿಳಾ ರೈತರು ಗಮನ ಸೆಳೆದರು, ಸಿದ್ದಿ ಸಮುದಾಯದ ಸದಸ್ಯರು ಭತ್ತ ಕಟಾವಿನ ಸಮಯದಲ್ಲಿನ ಸಾಂಪ್ರದಾಯಿಕ ಡಮಾಮಿ ನೃತ್ಯ ಪ್ರದರ್ಶನ ಮಾಡಿದರು. ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಕಿಚನ್ ಗಾರ್ಡನ್ ಮಾಡಿಕೊಳ್ಳಲು ಸೀಡ್ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ವಿ.ಎನ್. ಹೆಗಡೆ, ಆಶಾ ನಾಯರ್, ಪಂಚಾಯತ್ ಸಿಬ್ಬಂದಿ ವರ್ಗ ತಾಲೂಕಾ ಅಭಿಯಾನ ನಿರ್ವಹಣಾ ಘಟಕ ತಾ.ಪಂ ಯಲ್ಲಾಪುರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.