ದಾಂಡೇಲಿ: ಬದುಕು ಹಾಗೂ ಬರಹಗಳಲ್ಲಿ ಅಪ್ಪಟ ಪ್ರಾಮಾಣಿಕತೆಯ ಜೊತೆಗೆ ಪ್ರಭುತ್ವ, ಸಾಮಾಜಿಕ, ಸಾಂಸ್ಕೃತಿಕ ಬದುಕಿನೊಂದಿಗೆ ಎಂದೂ ರಾಜಿ ಮಾಡಿಕೊಳ್ಳದ ತಮ್ಮದೇ ಆದ ಸ್ವಾಭಿಮಾನದ ಮೌಲ್ಯ ಮಾರ್ಗವೊಂದರ ಪ್ರವರ್ತಕರಾಗಿ ಪ್ರೊ. ಜಿ. ಎಚ್. ನಾಯಕ ಅವರು ಕರ್ನಾಟಕದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಕಂಗೊಳಿಸುತ್ತಾರೆ. ಕರ್ನಾಟಕದ ಬಾರ್ಡೋಲಿ ಅಂಕೋಲೆಯ ಸ್ವಾತಂತ್ರ್ಯ ಹೋರಾಟದ ಕೌಟುಂಬಿಕ ಮತ್ತು ಸಾಮಾಜಿಕ ಪರಿಸರದಲ್ಲಿ ಹುಟ್ಟಿ ಬೆಳೆದು, ಆ ಮೌಲ್ಯಗಳನ್ನು ಮೈಗೂಡಿಸಿಕೊಂಡ ಪ್ರತಿಭೆ, ಪ್ರಾಮಾಣಿಕತೆ ಹಾಗೂ ಪರಿಶ್ರಮಗಳ ಮೂಲಕ ಮೌಲ್ಯಯುತ ಬದುಕನ್ನು ಕಟ್ಟಿಕೊಂಡರು. ಬರಿಗಾಲಿನಲ್ಲಿ ಮೈಸೂರಿಗೆ ಶಿಕ್ಷಣಕ್ಕೆ ಕಾಲಿಟ್ಟ ಬಡ ಹುಡುಗನೊಬ್ಬ ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ವಿಮರ್ಶಕ ಹಾಗೂ ಚಿಂತಕರಾಗಿ ಬೆಳೆದ ಕಥೆ ರೋಮಾಂಚನಕಾರಿಯಾಗಿದೆ. ಹಳೆಗನ್ನಡ ಹಾಗೂ ಹೊಸಗನ್ನಡ ಸಾಹಿತ್ಯಗಳೆರಡನ್ನೂ ವಿಮರ್ಶಿಸಬಲ್ಲ ಅಪಾರ ವಿದ್ವತ್ತು ಅವರದಾಗಿತ್ತು. ಇವರು ಪಂಪನಿಂದ ಹಿಡಿದು ಆಧುನಿಕ ಲೇಖಕರವರೆಗೆ ಎಲ್ಲರ ಸಾಹಿತ್ಯಿಕ ಸಾಧನೆ ಹಾಗೂ ಮಿತಿಗಳನ್ನು ಗುರುತಿಸಿದ ಕನ್ನಡದ ಅಪರೂಪದ ವಿಮರ್ಶಕರಾಗಿದ್ದಾರೆಂದು ಮೈಸೂರಿನ ಹಿರಿಯ ಲೇಖಕ ಜಿ. ಪಿ. ಬಸವರಾಜುರವರು ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಕನ್ನಡ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾಂಡೇಲಿ, ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಾಂಡೇಲಿ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಂಪ ಪ್ರಶಸ್ತಿ ವಿಜೇತ ಸಾಹಿತಿ ದಿ. “ಜಿ. ಎಚ್. ನಾಯಕ ಅವರ ಬದುಕು ಮತ್ತು ಬರಹ” ಎಂಬ ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ವಿಮರ್ಶೆ, ಸಂಸ್ಕೃತಿ ಚಿಂತನೆ, ಆತ್ಮಕಥೆ, ವ್ಯಕ್ತಿ ಚಿತ್ರ, ಸಂಶೋಧನೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ನ್ಯಾಯ ನಿಷ್ಠುರವಾದ ಮಾರ್ಗವೊಂದನ್ನು ಬಿಟ್ಟು ಹೋಗಿದ್ದಾರೆ. ಅವರನ್ನು ಕುರಿತಂತೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಬಹುದೊಡ್ಡ ಚರ್ಚೆಗಳು ನಡೆಯಬೇಕಾಗಿದೆ. ಕನ್ನಡ ಸಾಂಸ್ಕೃತಿಕ ಲೋಕ ಅವರನ್ನು ನಿರ್ಲಕ್ಷಿಸಿದೆ ಎಂದು ಅವರು ವಿಷಾದಿಸಿದರು.
ಮುಖ್ಯ ಅತಿಥಿಗಳಾಗಿ ಆಕಾಶವಾಣಿ ಧಾರವಾಡ ಕೇಂದ್ರದ ನಿರ್ದೇಶಕರಾದ ಡಾ. ಬಸು ಬೇವಿನಗಿಡದ, ಕ.ವಿ.ವಿ ಧಾರವಾಡ ಪ್ರಸಾರಾಂಗದ ನಿರ್ದೇಶಕರಾದ ಡಾ. ಚಂದ್ರಶೇಖರ ರೊಟ್ಟಿಗವಾಡ ಹಾಗೂ ಉ.ಕ. ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ. ಎನ್. ವಾಸರೆ ಅವರು ಪಾಲ್ಗೊಂಡರು. ಡಾ. ಬಸವರಾಜ. ಎನ್. ಅಕ್ಕಿ ಹಾಗೂ ಡಾ. ನಾಸೀರಅಹ್ಮದ ಜಂಗೂಭಾಯಿ ಇವರುಗಳು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಡಿ. ಒಕ್ಕುಂದ ಅವರು ನವ್ಯದ ರೂಪನಿಷ್ಠ ವಿಮರ್ಶೆಯ ಮಿತಿಯನ್ನು ಮೀರಿ ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳನ್ನೂ ಒಳಗೊಳ್ಳುವುದರ ಮೂಲಕ ಜಿ. ಎಚ್. ನಾಯಕ ಅವರು ತಮ್ಮದೇ ಆದ ವಿಮರ್ಶೆಯ ಹೊಸ ಮಾರ್ಗವೊಂದನ್ನು ರೂಪಿಸಿದರು ಎಂದು ಅಭಿಪ್ರಾಯಪಟ್ಟರು.
ಕ.ವಿ.ವಿ ಧಾರವಾಡದ ಸಹಾಯಕ ನಿರ್ದೇಶಕರಾದ ಡಾ. ಸಿದ್ಧಪ್ಪ ಎನ್. ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರವೀಣ ನಾಯಕ ರವರು “ಪ್ರಾಚೀನ ಕನ್ನಡ ಕಾವ್ಯ ಜಿ. ಎಚ್. ನಾಯಕರ ವಿಮರ್ಶಾ ನೆಲೆಗಳು” ಎಂಬ ವಿಷಯದಲ್ಲಿ ನಾಗರೇಖಾ ಗಾಂವಕರ “ಹೊಸಗನ್ನಡ ಸಾಹಿತ್ಯ: ಜಿ. ಎಚ್. ನಾಯಕರ ವಿಮರ್ಶಾ ತಾತ್ವಿಕತೆ” ಎಂಬ ವಿಷಯದಲ್ಲಿ ಹಾಗೂ ಡಾ. ವಿನಯಾ ಜಿ. ನಾಯಕ ಅವರು “ಜಿ. ಎಚ್. ನಾಯಕ ಅವರ ಆತ್ಮಕಥೆ-ಬಾಳು” ಕುರಿತು ಉಪನ್ಯಾಸಗಳನ್ನು ನೀಡಿದರು.
ಕಾವ್ಯಾ ಭಟ್ ಪ್ರಾರ್ಥಿಸಿದರು. ವೈಷ್ಣವಿ ಸ್ವಾಗತಿಸಿದರು, ಕೋಮಲ ವಂದಿಸಿದರು ಹಾಗೂ ಕು. ಸೌಮ್ಯ ನೇತ್ರೇಕರ ಮತ್ತು ಕು. ಶೋಭಾ ಪಾಟೀಲ ನಿರೂಪಿಸಿದರು. ಕಾಲೇಜಿನಲ್ಲಿ ಕ.ವಿ.ವಿ ಪ್ರಸಾರಾಂಗದ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ನೆರವೇರಿತು.