ದಾಂಡೇಲಿ: ನಗರದ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿದಿನ ಬೆಳಿಗ್ಗೆ 8.45 ನಿಮಿಷಕ್ಕೆ ಹೊರಡಬೇಕಾದ ದಾಂಡೇಲಿ-ಯಲ್ಲಾಪುರ- ಶಿರಸಿ ಬಸ್ ಶುಕ್ರವಾರ ನಿಗದಿತ ಸಮಯಕ್ಕೆ ಹೊರಡದೇ ಸುಮಾರು 1 ಗಂಟೆ 15 ನಿಮಿಷದ ನಂತರ ಹೊರಡಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿ, ಸಾರಿಗೆ ಘಟಕದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಎಂದಿನಂತೆ ಬೆಳಿಗ್ಗೆ 8.45 ನಿಮಿಷಕ್ಕೆ ಹೊರಡಬೇಕಾದ ಬಸ್, ದುರಸ್ತಿಯ ಹಿನ್ನೆಲೆಯಲ್ಲಿ ಮತ್ತೆ ಸಾರಿಗೆ ಡಿಪೋಗೆ ಹೋಗಿ ದುರಸ್ತಿ ಮಾಡಿಕೊಂಡು 10 ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದಿದೆ. ಆನಂತರ ಪ್ರಯಾಣಿಕರು ಸಾರಿಗೆ ಘಟಕದ ನಿರ್ಲಕ್ಷಕ್ಕೆ ಹಿಡಿ ಶಾಪವನ್ನು ಹಾಕಿ ಬಸ್ಸನ್ನು ಹತ್ತಿದ್ದಾರೆ.
ಸಾರಿಗೆ ಡಿಪೋದಿಂದ ಬಸ್ ನಿಲ್ದಾಣಕ್ಕೆ ಬಸ್ ಬರುವ ಮುನ್ನವೇ, ಬಸ್ಸನ್ನು ಸರಿಪಡಿಸಿ ನಿಲ್ದಾಣಕ್ಕೆ ಬರಬೇಕೆ ವಿನಹ: ಬಸ್ ನಿಲ್ದಾಣಕ್ಕೆ ಬಂದ ನಂತರ ಮತ್ತೆ ದುರಸ್ತಿಗೆ ಕೊಂಡೋಗುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ. ಕೆಟ್ಟು ಹೋದ ಬಸ್ಸನ್ನು ದುರಸ್ತಿ ಮಾಡಿ ಅದನ್ನೇ ಕಳುಹಿಸುವ ಬದಲು, ನಿಗದಿತ ಸಮಯಕ್ಕೆ ಬದಲಿ ಬಸ್ಸನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಇನ್ನೂ ಮುಂದೆಯಾದರೂ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.