ಯಲ್ಲಾಪುರ: ಗ್ರಾಮದ ಸರ್ವತೋಮುಖ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಹಾಯದಿಂದ ಜಕ್ಕೊಳ್ಳಿಯಲ್ಲಿ ಆರಂಭಿಸಲಾದ ಗ್ರಾಮ ಅರಣ್ಯ ಸಮಿತಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಚಟುವಟಿಕೆಗಳ ಸಾಧಕ-ಬಾಧಕಗಳ ಚರ್ಚೆ ನಡೆಸಲೆಂದು ಇಂದು ಬುಧವಾರ ಅರಣ್ಯ ಇಲಾಖೆ ಮತ್ತು ಜಕ್ಕೊಳ್ಳಿ (ದೊಡ್ಡಬೇಣ) ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಮಂಡಳಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿ.ಎಫ್.ಸಿ. ಅಧ್ಯಕ್ಷ ರವಿ ಶಾಸ್ತ್ರಿ ಹೇಳಿದರು.
ಅವರು ತಾಲೂಕಿನ ಕುಂದರಗಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡಬೇಣದ ಸರ್ಕಾರಿ ಸ.ಕಿ.ಪ್ರಾ. ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ, ಯೋಜನೆಯ ಪಾಲಿಸಿದರೆ ಪಾಲು ಮೂಲಕ ಸಿಗಬಹುದಾದ ಲಾಭಾಂಶವನ್ನು ಪ್ರತಿವರ್ಷವೂ ನಮ್ಮ ಸದಸ್ಯರಿಗೆ ನೀಡಲಾಗುತ್ತಿದೆ. ಅಲ್ಲದೇ ಈ ಬಾರಿ ಲಿಂಬು ಸಸಿಗಳನ್ನು ವಿತರಿಸಲಾಗಿದ್ದು, ಈ ಬಾರಿ ಕಹಿಬೇವಿನ ಗಿಡಗಳನ್ನು ವಿತರಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. ವಿಶೇಷವೆಂದರೆ ಈ ಪ್ರದೇಶದ ಅರಣ್ಯ ನಡುವಿನ ರಸ್ತೆಯಂಚಿಗೆ ಬೆಳೆದುನಿಂತ ಒಣಮರಗಳನ್ನು ಕೂಡಾ ಇಲಾಖೆಯ ಸಹಕಾರದಿಂದ ಕಡಿಸಲಾಗಿದ್ದು, ಈ ಬಾರಿ ಗ್ರಾಮಸ್ಥರ ಸಹಕಾರದಿಂದ ಶ್ರಮದಾನದ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದುನಿಂತ ಕಸ-ಕಡ್ಡಿ ಮತ್ತು ಮುಳ್ಳು-ಮಟ್ಟಿಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದ ಅವರು, ವಿ.ಎಫ್.ಸಿ. ಲಾಭಾಂಶದ ಪಾಲಿನಲ್ಲಿ ಸಂಗ್ರಹಿಸಲಾದ ಅಡುಗೆ ಪಾತ್ರೆಗಳ ಬಾಡಿಗೆಯಿಂದ ಈ ಬಾರಿ ಈವರೆಗೆ 18,000 ರೂ. ಆದಾಯ ದೊರಕಿದೆ ಎಂದರು.
ವಿ.ಎಫ್.ಸಿ. ಮಾಜಿ ಅಧ್ಯಕ್ಷ ನಾರಾಯಣ ಹೆಗಡೆ ಮಾತನಾಡಿ, ಕಸ್ತೂರಿ ರಂಗನ್ ವರದಿಯಲ್ಲಿ ತಾಲೂಕಿನ 91 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದ್ದು, ಇದು ರೈತರಿಗೆ ಸಮಸ್ಯೆಯೂ ಆಗಿದ್ದು, ಅನಪೇಕ್ಷಿತವಾಗಿದೆ. ಆದ್ದರಿಂದ ಈ ವರದಿಯ ಅನುಷ್ಠಾನವನ್ನು ನಮ್ಮ ವಿ.ಎಫ್.ಸಿ. ವಿರೋಧಿಸುತ್ತದೆ ಎಂದರು. ಉಪವಲಯಾರಣ್ಯಾಧಿಕಾರಿ ಜಗದೀಶ ಪಾಲಕನವರ್ ಮಾತನಾಡಿ, ಈ ಬಾರಿ ‘ಪಾಲಿಸಿದರೆ ಪಾಲು’ ಯೋಜನೆಯಡಿ ಸಿಗುವ ಆದಾಯವನ್ನು ಊರಿನಲ್ಲಿ ನೀರಿನ ತೊಟ್ಟಿ ಮತ್ತು ಕೆರೆ ನಿರ್ಮಾಣಗಳಿಗೆ ಬಳಸಬೇಕೆಂದು ಸಲಹೆ ನೀಡಿದರು.
ಹಿರಿಯ ನಾಗರಿಕ ಮಂಜುನಾಥ ನಾಯ್ಕ ಸಭೆಯನ್ನು ಉದ್ಘಾಟಿಸಿ, ಮಾತನಾಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣ ಹೆಗಡೆ, ಗ್ರಾ.ಪಂ.ಸದಸ್ಯ ಧಾಕ್ಲು ಪಾಟೀಲ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳ ಸ್ವಾಗತಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ, ದತ್ತಾತ್ರೇಯ ಹೆಗಡೆ ಸ್ವಾಗತಿಸಿದರು. ಮಂಜುನಾಥ ಶಾಸ್ತ್ರಿ ನಿರ್ವಹಿಸಿ, ವಂದಿಸಿದರು.
ವಿ.ಎಫ್.ಸಿ ಯೋಜನೆಯ ಮೂಲಕ ದೊರಕುವ ಆದಾಯದಲ್ಲಿ ನೀರಿನ ತೊಟ್ಟಿ, ಕೆರೆ ನಿರ್ಮಾಣ ಮತ್ತು ಸದಸ್ಯರಿಗೆ ಕಹಿಬೇವಿನ ವಿತರಣೆ ಮಾಡಲು ಸಭೆ ನಿರ್ಣಯಿಸಿತು. ಮುಖ್ಯವಾಗಿ ಕಸ್ತೂರಿ ರಂಗನ್ ವರದಿಯ ಕುರಿತಾಗಿ ಆಕ್ಷೇಪಿಸಿದ ಸಭೆ ಇದನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ, ಸಭೆಯಲ್ಲಿ ನಿರ್ಣಯ ಮಂಡಿಸಲಾಯಿತು.