ಯಲ್ಲಾಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನ ಅನ್ಯ ಯೋಜನೆಗಳಿಗೆ ಬಳಸದೆ ಸಂಪೂರ್ಣ ಅನುದಾನ ಎಸ್ಸಿ-ಎಸ್ಟಿಗಳ ಅಭಿವೃದ್ಧಿ ಯೋಜನೆಗೆ ಬಳಕೆ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಧ್ವನಿ ಎತ್ತಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕಾಗಿ ಇಟ್ಟಿದ್ದ 33,000 ಕೋಟಿ ಅನುದಾನದಲ್ಲಿ 11,000 ಕೋಟಿಗಳಷ್ಟನ್ನು ಅನ್ಯ ಉದ್ಧೇಶಕ್ಕೆ ಬಳಸಿರುವುದು ಖೇದಕರ. ನಾವೆಲ್ಲರೂ ಇದನ್ನು ಪಕ್ಷಾತೀತವಾಗಿ ವಿರೋಧಿಸಿದ್ದೇವೆ. ಈ ಪಂಗಡಕ್ಕಾಗಿ ಮೀಸಲಿಟ್ಟಿರುವ ಹಣ ನಮ್ಮ ಹಕ್ಕಾಗಿದೆ. ಅದನ್ನು ಅನ್ಯ ಉದ್ಧೇಶಕ್ಕಾಗಿ ಬಳಸುವುದು ಸರಿಯಲ್ಲ. ಮೀಸಲಿಟ್ಟ ಹಣವನ್ನು ಸದರಿ ಯೋಜನೆಗೆ ಬಳಸಬೇಕೆಂದು ಅವರು ಆಗ್ರಹಿಸಿದರು.