ಕುಮಟಾ: ತಾಲೂಕಿನ ಮಿರ್ಜಾನ ಗ್ರಾಮದಲ್ಲಿ ಗೋರಸ್ಥಾನವಿದ್ದು, ಇಂದಿಗೂ ಗೋವುಗಳು ಅಲ್ಲಿ ಮೇಯುತ್ತಿರುತ್ತವೆ. ಆದರೆ ಅಲ್ಲಿನ ಮುಸಲ್ಮಾನ್ ಸಮುದಾಯದವರು ಕಬಳಿಕೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ದೂರಿದರು.
ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮಿರ್ಜಾನ್ ಗ್ರಾಮದ ಸರ್ವೆ ನಂಬರ 238 ರಲ್ಲಿ ಗೋರಸ್ತಾನ ಎಂದಿದ್ದು, ಇದಕ್ಕೆ ಆವಾರ ಗೋಡೆ ಹಾಕಲಾಗಿದೆ. 9.12 ಎಕರೆ ಜಾಗ 1932 ರಿಂದ 2005 ವರೆಗೆ ದಾಖಲೆಯಲ್ಲಿ ಸರಕಾರಿ ಖರಾಬು ಎಂದಿತ್ತು. ಇದು ಗೊರಸ್ಥಾನವಾಗಿದ್ದು, 2005-16 ರಲ್ಲಿ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ದಾಖಲೆಯಲ್ಲಿ ಗೋರಸ್ಥಾನ ಎಂದು ತಪ್ಪಾಗಿದೆ. ಅದು ಖಬರಸ್ಥಾನ ಆಗಬೇಕು ಎಂದು ತಿದ್ದುಪಡಿ ಮಾಡಿದ್ದಾರೆ. ಬಳಿಕ 2008ರಲ್ಲಿ ದರ್ಗಾ ಮತ್ತು ಖಬರಸ್ಥಾನ ಎಂದು ಮತ್ತೆ ತಿದ್ದುಪಡಿ ಮಾಡಲಾಗಿದೆ. ಮುಸಲ್ಮಾನ್ ಸಮುದಾಯದಲ್ಲಿ ದರ್ಗಾ ಎಂದರೆ ಮಹಾತ್ಮರ ಸಮಾಧಿಯಾಗಿದೆ. ಇಲ್ಲಿ ಅವರ ಧರ್ಮದ ರೀತಿ ಪೂಜೆ ಪುನಸ್ಕಾರ ನಡೆಯುತ್ತದೆ. ಖಬರಸ್ಥಾನ ಮೃತರನ್ನು ಹೂಳುವ ಸ್ಥಳವಾಗಿದೆ. ಈ ಎರಡೂ ಎಲ್ಲಿಯೂ ಒಟ್ಟಿಗೆ ಇರುವುದಿಲ್ಲ. ಜಾಗ ತಮ್ಮದು ಎಂದು ತೋರಿಸಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಜಮೀನಿನಲ್ಲಿ ಮತ್ತೆ ಕಂಪೌಂಡ್ ಹಾಲ್ ಬಂದರೆ ಪ್ರತಿಭಟನೆ ಮಾಡಬೇಕಾಗುತ್ತದೆ. ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಕಂದಾಯ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ ಖಬರಸ್ಥಾನವಲ್ಲ ಎನ್ನುವುದನ್ನು ಸಂಬಂಧಿಸಿದವರಿಗೆ ತಿಳಿಸಬೇಕು. ದಾಖಲೆ ತಿದ್ದಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಕುಮಟಾ ಬಿಜೆಪಿ ಉಪಾದ್ಯಕ್ಷ ಗಣೇಶ ಅಂಬಿಗ ಮಾತನಾಡಿ, ಈ ಹಿಂದೆ ಈ ಜಾಗದ ಪಕ್ಕದಲ್ಲಿ ಮುಸ್ಲಿಂ ಸಮುದಾಯದವರು ಮೃತಪಟ್ಟ ವ್ಯಕ್ತಿಗಳನ್ನು ಹೂಳುತ್ತಿದ್ದರು. ಆದರೂ ನಾವು ಸುಮ್ಮನಿದ್ದೆವು. ಆದರೆ ಈಗ ಜಾಗವನ್ನೇ ಅತಿಕ್ರಮಣ ಮಾಡಿದ್ದಾರೆ. ಮೊದಲಿನಿಂದಲೂ ಗೋರಸ್ಥಾನ ಜಾಗ ಕಬಳಿಸಲು ಪ್ರಯತ್ನಿಸಿದಾಗ ಪ್ರತಿಭಟನೆ ಮಾಡಿದ್ದೇವೆ. ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದೇವೆ. ಯಾವುದೇ ಕಾರಣಕ್ಕೂ ಗೋರಸ್ಥಾನ ಜಾಗವಾದ 9 ಎಕರೆ ಜಾಗವನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮನೋಜ ಭಟ್ಟ, ರೋಷನಿ ಮಾಳಸೆಕರ, ನಾಗೇಶ ಕುರುಡೇಕರ, ಪಾಂಡು ಪಟಗಾರ, ಮಂಜುನಾಥ ಮುಕ್ರಿ, ಉದಯ ನಾಯ್ಕ, ಭಾಸ್ಕರ ಅಂಬಿಗ, ಭಗೀರಥ ನಾಯ್ಕ, ಮಂಜುನಾಥ ಪಟಾಗಾರ, ವಾಸು ಅಂಬಿಗ, ಮಾಸ್ತಿ ಮುಕ್ರಿ, ಉಮೇಶ ಪಟಗಾರ, ಈಶ್ವರ ಪಟಗಾರ ಉಪಸ್ಥಿತರಿದ್ದರು.