ಕಾರವಾರ: ಡಾಂಬರು ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಸ್ಪಿರಿಟ್ ಟ್ಯಾಂಕರೊಂದು ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಅಮದಳ್ಳಿ ಬಳಿ ನಡೆದಿದೆ.
ತೆಲಂಗಾಣದಿಂದ ಗೋವಾಕ್ಕೆ ಸ್ಪಿರಿಟ್ ಸಾಗಿಸುತ್ತಿದ್ದ ಟ್ಯಾಂಕರ್ ಓವರ್‌ಟೇಕ್ ಮಾಡುವ ಭರದಲ್ಲಿ ಡಾಂಬರ್ ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದು ಟ್ಯಾಂಕರ್ ಮುಂಬದಿ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ಥಳಕ್ಕೆ ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಭದ್ರತೆ ಇಲ್ಲದೇ ಸ್ಪಿರಿಟ್ ಸಾಗಿಸುತ್ತಿದ್ದುದು ಬೆಳಕಿಗೆ ಬಂದಿದ್ದು ತನಿಖೆ ಮುಂದುವರೆಸಿದ್ದಾರೆ. ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.