ಶಿರಸಿ: 70 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಹುಳಗೋಳ ಸೇವಾ ಸಹಕಾರಿ ಸಂಘದ ಸಹಕಾರಿ ಸಭಾಭವನದಲ್ಲಿ ನ. 20 ಸೋಮವಾರದಂದು ಸಹಕಾರಿ ತರಬೇತಿ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಹಿರಿಯ ನಿರ್ದೇಶಕ, ಟಿಎಂಎಸ್ ಶಿರಸಿ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ, ಸಂಘವು ನಡೆದುಬಂದ ಹಾದಿ, ಸಂಘದೊಂದಿಗಿನ ಸದಸ್ಯರ ಭಾಂದವ್ಯದ ಕುರಿತಾಗಿ ವಿವರಿಸಿ, ಮುಂದಿನ ದಿನಗಳಲ್ಲಿಯೂ ಉತ್ತಮ ಬಾಂಧವ್ಯ ಮುಂದುವರೆಯುವಂತೆ ಕರೆ ನೀಡಿದರು. ಅಥಿತಿಗಳಾಗಿ ಆಗಮಿಸಿದ ಟಿಎಂಎಸ್ ಶಿರಸಿ ಮುಖ್ಯ ಕಾರ್ಯನಿರ್ವಾಹಕರಾದ ಎಂ.ಎ.ಹೆಗಡೆ ಮಾತನಾಡಿ, ಹುಳಗೋಳ ಸೊಸೈಟಿಯ ವಿವಿಧ ರೀತಿಯ ಕಾರ್ಯ ಚಟುವಟಿಕೆಗಳು ಸಹಕಾರದ ಮೂಲ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿದ್ದು ಇದು ಇತರ ಸಹಕಾರಿ ಸಂಘಗಳಿಗೆ ಮಾದರಿ ಎಂದು ಶ್ಲಾಘಿಸಿದರು.
ನಂತರ ಜರುಗಿದ ಸಹಕಾರಿ ತರಬೇತಿ ಕಾರ್ಯಕ್ರಮದಲ್ಲಿ, ಅಡಿಕೆ ಬೆಳೆಗಾರರಲ್ಲಿ ಈಗಾಗಲೇ ಸಾಕಷ್ಟು ಆತಂಕ ಮೂಡಿಸಿರುವ ಎಲೆ ಚುಕ್ಕಿ ರೋಗದ ನಿಯಂತ್ರಣ ವಿಷಯ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ವಿ.ಎಂ.ಹೆಗಡೆ ಶಿಂಗನಮನೆ ಇವರು ಸವಿಸ್ತಾರವಾಗಿ ರೋಗದ ನಿಯಂತ್ರಣ ಕುರಿತು ಮಾಹಿತಿ ನೀಡಿ ಸದಸ್ಯರ ಸಂದೇಹಗಳಿಗೆ ಉತ್ತರ ನೀಡಿದರು. ಸಭೆಯಲ್ಲಿ ಸಂಘದ ಹಿರಿಯ ಪ್ರಾಮಾಣಿಕ ನಿಷ್ಠಾವಂತ ಸದಸ್ಯರಾದ ವಿಶ್ವೇಶ್ವರ ವೆಂಕಟ್ರಮಣ ಹೆಗಡೆ ಹಕ್ಕಿಮನೆ, ಗಜಾನನ ಶ್ರೀಕಂಠ ಭಟ್ಟ ಬೊಮ್ನಳ್ಳಿ, ರಘುಪತಿ ನಾರಾಯಣ ಭಟ್ಟ ಗೋಳಿಕೊಪ್ಪ, ಮಹಾಬಲೇಶ್ವರ ಸುಬ್ರಾಯ ಹೆಗಡೆ ಮಾತ್ನಳ್ಳಿ, ದತ್ತಾತ್ರಯ ಕೃಷ್ಣ ಹೆಗಡೆ ಮಲೇನಳ್ಳಿ, ಶೇಖರ ಮಹಾದೇವ ನಾಯ್ಕ ಬೆಳಲೆ, ಲಿಂಗು ಗಣಪ ಗೌಡ ಸದಾಶಿವಳ್ಳಿ ಮತ್ತು ಶ್ರೀಮತಿ ಪಾರ್ವತಿ ಪರಮೇಶ್ವರ ಭಂಡಾರಿ ಬೊಮ್ನಳ್ಳಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸನ್ಮಾನಿತ ಶೇಖರ ನಾಯ್ಕ ಇವರ ಮಗ ಹಾಗೂ ಭೈರುಂಬೆ ಪಂಚಾಯತದ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ ಇವರು ಸನ್ಮಾನಿತರ ಪರವಾಗಿ ಅಭಿನಂದನಾ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ವಿ.ಎಸ್.ಹೆಗಡೆ ಕೆಶಿನ್ಮನೆ ಸನ್ಮಾನಿತ ಸದಸ್ಯರನ್ನು ಅಭಿನಂದಿಸಿ ಸದಸ್ಯರ ಹಾಗೂ ಸಂಘದ ನಡುವಿನ ವ್ಯವಹಾರವನ್ನು ಸ್ಮರಿಸಿ ಎಲ್ಲಾ ಸದಸ್ಯರೂ ಸಂಘದಲ್ಲಿ ಹೆಚ್ಚಿನ ವ್ಯವಹಾರ ಕೈಗೊಳ್ಳುವಂತೆ ವಿನಂತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಗಣಪತಿ ಎಂ. ಹೆಗಡೆ ಮಾತ್ನಳ್ಳಿ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಶಿಕಾಂತ ಹೆಗಡೆ ತಾರಗೋಡ ಹಾಗೂ ಪ್ರಸನ್ನ ಹೆಗಡೆ ಕೆಶಿನ್ಮನೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಅಂತಿಮವಾಗಿ ಸಂಘದ ಉಪಾಧ್ಯಕ್ಷರಾದ ಆರ್.ಎಸ್.ಭಟ್ಟ ನಿಡಗೋಡ ಎಲ್ಲರಿಗೂ ವಂದಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.