ದಾಂಡೇಲಿ: ಜಿ+2 ಆಶ್ರಯ ಮನೆ ವಿತರಣೆ & ಕೆ.ಎಚ್.ಬಿ ನಿವೇಶನಕ್ಕೆ ಆಗ್ರಹಿಸಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಗರಸಭೆಯ ಮುಂಭಾಗ ನಡೆಯುತ್ತಿದ್ದ ಧರಣಿ ಸತ್ಯಾಗ್ರಹ ಅಂತ್ಯಗೊಂಡಿದೆ.
ಧರಣಿ ನಿರತರ ಜೊತೆ ಕರ್ನಾಟಕ ಗ್ರಹ ಮಂಡಳಿ ನಿಗಮದ ಅಧಿಕಾರಿ ಜ್ಯೋತಿ ನಾಜ್ರೇ ಹಾಗೂ ಜಿ+2 ಆಶ್ರಯ ಮನೆಗಳ ನಿರ್ಮಾಣ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳು ನಗರ ಸಭೆಯ ಸಭಾ ಭವನದಲ್ಲಿ ಮಾತುಕತೆಯನ್ನು ನಡೆಸಿ ಇನ್ನು ಮೂರು ತಿಂಗಳ ಒಳಗೆ 384 ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರಿಸುವ ಭರವಸೆಯನ್ನು ನೀಡಿದರು. ಅದಾದ ಬಳಿಕ ಉಳಿದ ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ತ್ವರಿತ ಕ್ರಮವನ್ನು ಕೈಗೊಳ್ಳಲಾಗುವುದೆಂದು ಧರಣಿ ನಿರತರಿಗೆ ಭರವಸೆಯನ್ನು ನೀಡಿದರು.
ಕೆ.ಎಚ್.ಬಿ ನಿವೇಶನಕ್ಕೆ ಸಂಬಂಧಿಸಿದಂತೆ ಶಾಸಕರ ಜೊತೆ ಚರ್ಚೆ ನಡೆಸಿ, ಅಗತ್ಯ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ಜ್ಯೋತಿ ನಾಜ್ರೇಯವರು ನೀಡಿದರು. ಈ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಅನೀಲ್ ರಾಯ್ಕರ್, ತಹಶೀಲ್ದಾರ್ ಶೈಲೇಶ ಪರಮಾನಂದ, ಪಿಎಸೈ ಐ.ಆರ್.ಗಡ್ಡೇಕರ, ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್, ನಗರ ಸಭೆಯ ಸದಸ್ಯರು, ನಗರ ಸಭೆಯ ಅಧಿಕಾರಿಗಳು, ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.