ಯಲ್ಲಾಪುರ: ಊರಿನ ಉತ್ಸವಗಳಲ್ಲಿ ಸಾಧಕರನ್ನು, ಹಿರಿಯರನ್ನು ಗೌರವಿಸುವ ಕಾರ್ಯ ಅನುಸರಣೀಯ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಲ್.ಪಿ.ಭಟ್ಟ ಗುಂಡ್ಕಲ್ ಹೇಳಿದರು.
ಅವರು ಬುಧವಾರ ರಾತ್ರಿ ತಾಲೂಕಿನ ಕವಡಿಕೆರೆ ದುರ್ಗಾದೇವಿ ದೇವಸ್ಥಾನದಲ್ಲಿ ಗಂಗಾಷ್ಟಮಿ ಉತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಯಕ್ಷಗಾನ ಕಲಾವಿದರಾದ ಗಣಪತಿ ಭಟ್ಟ ಹುಲಿಮನೆ, ಗಣಪತಿ ಭಾಗ್ವತ ಶಿಂಬಳಗಾರ ಹಾಗೂ ಯುವ ಕಲಾವಿದ ನಾಗರಾಜ ಭಟ್ಟ ಕುಂಕಿಪಾಲ ಅವರನ್ನು ಗೌರವಿಸಲಾಯಿತು. ಗಂಗಾಷ್ಟಮಿ ಉತ್ಸವದಲ್ಲಿ ಊರಿಗೆ ಬರುವ ಭಕ್ತರಿಗೆ ಅನೇಕ ವರ್ಷಗಳಿಂದ ಆತಿಥ್ಯ ನೀಡುತ್ತ ಬಂದ ಮಾತೆಯರನ್ನು, ಹಿರಿಯರನ್ನು ಗೌರವಿಸಲಾಯಿತು. ಹಿರಿಯರಾದ ಪರಮೇಶ್ವರ ಕೊಂಬೆ ಕಾರ್ಯಕ್ರಮ ಉದ್ಘಾಟಿಸಿದರು.
ತಾ.ಪಂ ಮಾಜಿ ಅಧ್ಯಕ್ಷ ರವಿ ಕೈಟ್ಕರ್, ಗ್ರಾ.ಪಂ ಸದಸ್ಯರಾದ ಟಿ.ಆರ್.ಹೆಗಡೆ, ಮೀನಾಕ್ಷಿ ಭಟ್ಟ, ಸುಬ್ಬಣ್ಣ ಉದ್ದಾಬೈಲ್, ತಾ.ಪಂ ಮಾಜಿ ಸದಸ್ಯ ನಾಗರಾಜ ಕವಡಿಕೆರೆ, ಟಿಎಸ್ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ್, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ ಇತರರಿದ್ದರು. ರಾಮಕೃಷ್ಣ ಕವಡಿಕೆರೆ, ವಿಘ್ನೇಶ್ವರ ಕವಡಿಕೆರೆ, ಗಣೇಶ ಕವಡಿಕೆರೆ ನಿರ್ವಹಿಸಿದರು. ನಂತರ ಮಕ್ಕಳಿಂದ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಿತು.