ಯಲ್ಲಾಪುರ: ಕವನ ಹುಟ್ಟುವುದಕ್ಕೆ ಸುತ್ತಲಿನ ವಾತಾವರಣ ಪ್ರೇರಣೆಯಾಗುತ್ತದೆ. ಅದನ್ನು ಸೂಕ್ಷ್ಮವಾಗಿ ಅವಲೋಕಿಸುವ ಗುಣ ನಮ್ಮಲ್ಲಿರಬೇಕು ಎಂದು ಹಿರಿಯ ಕವಿ ಕೃಷ್ಣ ಭಟ್ಟ ನಾಯಕನಕೆರೆ ಹೇಳಿದರು.
ಅವರು ತಾಲೂಕಿನ ನಂದೊಳ್ಳಿ ಸ.ಹಿ.ಪ್ರಾ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಾರ್ತೀಕ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ‘ಮಕ್ಕಳ ಕವಿಗೋಷ್ಠಿ’ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿದ್ದ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಗೀತಾ ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ಟ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕ.ಸಾ.ಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಕ.ಸಾ.ಪ ಗ್ರಾಮೀಣ ಭಾಗಗಳಲ್ಲಿ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ನವೆಂಬರ್ ತಿಂಗಳಲ್ಲಿ ಕನ್ನಡ ಕಾರ್ತೀಕ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು. ಗ್ರಾ.ಪಂ ಅಧ್ಯಕ್ಷೆ ಭವಾನಿ ಸಿದ್ದಿ, ನ್ಯಾಯವಾದಿ ಜಿ.ವಿ.ಭಾಗ್ವತ, ಎಸ್.ಡಿ.ಎಂ.ಸಿ ಅಧ್ಯಕ್ಷ ವಿನಾಯಕ ಭಟ್ಟ, ಪಿಡಿಒ ರಾಜೇಶ ಶೇಟ್ ಇದ್ದರು. ಕ.ಸಾ.ಪ ಗೌರವ ಕಾರ್ಯದರ್ಶಿ ಜಿ.ಎನ್.ಭಟ್ಟ ತಟ್ಟಿಗದ್ದೆ, ಮುಖ್ಯಾಧ್ಯಾಪಕ ಭಾಸ್ಕರ ನಾಯ್ಕ, ಶಿಕ್ಷಕ ಅಮಿತ್ ಚೌಹಾಣ ನಿರ್ವಹಿಸಿದರು. ಕವಿಗೋಷ್ಠಿಯಲ್ಲಿ ನಂದೊಳ್ಳಿ, ಸೂಳಗಾರ, ಮಾಗೋಡ ಕಾಲೋನಿ ಪ್ರಾಥಮಿಕ ಶಾಲೆ ಹಾಗೂ ನಂದೊಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕವನ ವಾಚನ ಮಾಡಿದರು.