ಯಲ್ಲಾಪುರ: ನಮ್ಮ ಜಿಲ್ಲೆಯಲ್ಲಿ ಸಾಂಸ್ಕೃತಿಕ ವಿಶೇಷತೆಗಳು ಇನ್ನೂ ಉಳಿದಿದೆ ಮತ್ತು ಬೆಳೆಯುತ್ತಿದೆ. ಇಲ್ಲಿಯ ಜನತೆಗೆ ಸಂಕಲ್ಪ ಉತ್ಸವ ಸಾಂಸ್ಕೃತಿಕ ಹಬ್ಬವಾಗಿದ್ದು, ನಮ್ಮ ಜಿಲ್ಲೆಯ ಹಬ್ಬ ಎಂದು ಹೆಮ್ಮೆಯಾಗುತ್ತದೆ. ನಾಡಿನ ಹಿರಿಯರನ್ನು, ಸಾಧಕರನ್ನು ಕರೆದು ಇಲ್ಲಿ ಸನ್ಮಾನಿಸಿ ಗೌರವಿಸುತ್ತಿರುವುದು ಶ್ಲಾಘನೀಯ. ಇದನ್ನು ನಾವು ಉಳಿಸಿ- ಬೆಳೆಸಿಕೊಂಡು ಹೋಗಬೇಕು ಎಂದು ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕು ಪಂಚಾಯತ ಆವಾರದ ಗಾಂಧಿ ಕುಟೀರದಲ್ಲಿ ನ.1ರಿಂದ ಪ್ರಾರಂಭವಾದ ಸಂಕಲ್ಪ ಉತ್ಸವದ ಮೂರನೇ ದಿನ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ವಯಸ್ಸಿನಲ್ಲಿ ಪ್ರಮೋದ ಹೆಗಡೆಯವರ ಜೀವನೋತ್ಸಾಹವನ್ನು ನಾವೆಲ್ಲರೂ ಕಲಿಯಬೇಕು. ಅವರ ಮಕ್ಕಳು ಕೂಡ ಬಹಳಷ್ಟು ಉತ್ಸಾಹದಿಂದ ಸಂಕಲ್ಪದಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರದ ಜವಾಬ್ದಾರಿ ಇರಲಿ ಬಿಡಲಿ, ಆದರೆ ತಾವು ಮಾಡಿರುವುದು ಮುಂದುವರೆಸಿಕೊಂಡು ಹೋಗುತ್ತಿರುವುದು ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿ ಎಂದರು.
ಸಿದ್ದಾಪುರದ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿ, ಹಿಂದೆ ಸಾಹಸ, ಧಾರ್ಮಿಕ, ಕರಾವಳಿ ಪ್ರವಾಸೋದ್ಯಮ ಇತ್ತು. ಇಂದು ಜಗತ್ತು ಬಯಸುತ್ತಿರುವುದು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು. ಉತ್ತರ ಭಾರತದಲ್ಲಿ ಇಂತಹ ಅನೇಕ ಸಾಂಸ್ಕೃತಿಕ ಉತ್ಸವದಲ್ಲಿ ವಿದೇಶಿಯರು ಭಾಗವಹಿಸುವುದು ಕಾಣುತ್ತೇವೆ. ನಮ್ಮ ಉತ್ತರಕನ್ನಡದಲ್ಲಿ ಇಂತಹ ಉತ್ಸವ ಹಮ್ಮಿಕೊಳ್ಳಲು ಎಲ್ಲ ರೀತಿಯ ಸಾಂಸ್ಕೃತಿಕ ಶ್ರೀಮಂತಿಕೆಯಿದೆ, ಇಚ್ಛಾಶಕ್ತಿ ತೋರಿಸಬೇಕಷ್ಟೇ. ನಾವು ಕೂಡ ಬಹುದೊಡ್ಡ ಉತ್ಸವಗಳನ್ನು ಹಮ್ಮಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಬೆಂಗಳೂರಿನ ಸುರಭಿ ಫೌಂಡೇಶನ್ ಡಾ.ಎಂ.ಕೆ.ಭಟ್ಟ, ಯುಗಾದಿ ಯತ್ಸವ ಸಮಿತಿ ಅಧ್ಯಕ್ಷ ಜಿ.ಎನ್.ಗಾಂವ್ಕರ್, ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ವೈಟಿಎಸ್ಎಸ್ ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ಮಾವಿನಮನೆ ಸೊಸೈಟಿ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಗಣ್ಯರು ಮಳೆನೀರು ಕೊಯ್ಲು ಅಭಿಯಾನದ ರೂವಾರಿ ಚಂದ್ರು ಎಸಳೆಯವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಿ ಸ್ಮಾನಿಸಿದರು. ಸಾನ್ವಿ ಪ್ರವೀಣ ಇನಾಮದಾರ ಪ್ರಾರ್ಥಿಸಿದರು. ಸಂಕಲ್ಪ ಕಾರ್ಯದರ್ಶಿ ಪ್ರಸಾದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಗೈದರು. ಶಿಕ್ಷಕ ಭಾಸ್ಕರ ನಾಯ್ಕ ನಿರೂಪಿಸಿದರು. ಪ್ರದೀಪ ಯಲ್ಲಾಪುರಕರ ವಂದಿಸಿದರು.