ಯಲ್ಲಾಪುರ: ಇಲ್ಲಿನ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಐವರು ಕುಖ್ಯಾತ ಅಂತಾರಾಜ್ಯ ಕಾಡುಪ್ರಾಣಿಗಳ ಹಂತಕರು ಹಾಗೂ ಅರಣ್ಯಗಳ್ಳರನ್ನ ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಯಲ್ಲಾಪುರ ಅರಣ್ಯ ವಿಭಾಗದ ಮಂಚಿಕೇರಿ ವಲಯದ ಜಕ್ಕೊಳ್ಳಿ ಬೀಟ್‌ನಲ್ಲಿ ಓರ್ವ ಆರೋಪಿಯನ್ನು ಬಂಧಿಸಿ ಆತನನ್ನು ತನಿಖೆಗೆ ಒಳಪಡಿಸಿದಾಗ, ಆತ ಇತರ ಆರೋಪಿಗಳ ಕುರಿತು ಮಾಹಿತಿ ನೀಡಿದ್ದನು. ಆರೋಪಿತನು ನೀಡಿದ ಮಾಹಿತಿ ಅನುಸರಿಸಿ, ಕಲಘಟಗಿ ಕ್ಯಾಂಪ್‌ನಲ್ಲಿರುವ ಟೆಂಟ್‌ಗಳನ್ನು ಪರಿಶೀಲಿಸಿದಾಗ ಅಲ್ಲಿ 30 ಕೆ.ಜಿ ಶ್ರೀಗಂಧದ ತುಂಡುಗಳು, ಕಾಡುಪ್ರಾಣಿಗಳ ಅವಶೇಷಗಳು, ಕಾಡುಪ್ರಾಣಿಗಳ ಹಿಡಿಯಲು ಬಳಸುವ ಬಲೆಗಳು ಹಾಗೂ ಇತರ ವಸ್ತುಗಳಾದ ಕೈ ಕೊಡಲಿ, ಸಣ್ಣ ಗರಗಸಗಳು, ಚಾಕು ಮತ್ತು ಇಕ್ಕಳಗಳು ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಮೂಲತ ಮಧ್ಯಪ್ರದೇಶದವರಾದ ಜಲ್‌ಜಲಾ, ಅಮಿತ್ ಆದಿವಾಸಿ ಪಾರ್ಧಿ, ಮಾಖನ್‌ಸಿಂಗ್ ಪಾರ್ಧಿ, ಸರಿಯಾನಾ ಇನ್‌ಸೇಠ, ಸಂಜೋನಿಬಾಯಿ ಬಂಧಿತರು. ಪ್ರಕರಣದಲ್ಲಿ ಒಟ್ಟು 20 ಲಕ್ಷ ರೂ.ಗಳ ಸಂಪತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ವಸಂತರೆಡ್ಡಿಯವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ನೇತೃತ್ವದ ತಂಡದಲ್ಲಿ ಮಂಚಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮಾವತಿ ಭಟ್, ಯಲ್ಲಾಪುರ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಆನಂದ, ಮುಂಡಗೋಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿ ಎಮ್ ಹುಳಕೋಟಿ, ಮಂಚಿಕೇರಿ ವಲಯದ ವಲಯ ಅರಣ್ಯಾಧಿಕಾರಿ ಅಮಿತಕುಮಾರ ಚೌಹಾಣ್, ಮಂಚಿಕೇರಿ ವಲಯದ ಉಪ ವಲಯ ಅರಣ್ಯಧಿಕಾರಿಗಳಾದ ಜಗದೀಶ ಪಾಲಕನವ. ಕಲ್ಲಪ ಬರದುರ, ಮಂಜುನಾಥ್ ಅಗೇರ, ಪವನ್ ಲೋಕುರ್, ವಿರಾಜ ನಾಯಕ ಹಾಗೂ ಗಸ್ತು ಅರಣ್ಯ ಪಾಲಕರುಗಳಾದ ವಿಷ್ಣು ಪೂಜಾರಿ, ಗಣೇಶ, ಶಂಕರ, ಬಸವರೆಡ್ಡಿ, ಭೀಮಾಶಂಕರ್ ಹಾಗೂ ತಾರಾ ಮಡಿವಾಳ ಹಾಗೂ ವಾಹನ ಚಾಲಕರಾದ ಗಂಗಾಧರ್ ರೆಡ್ಡಿ, ಮಂಜುನಾಥ್ ನಾಯಕ, ಮೋಹನ ಕಂಡೇಕರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.