ಕಾರವಾರ: ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ನಾಮನಿರ್ದೇಶಿತ ಸದಸ್ಯರಿಗೆ ಅವಕಾಶ ನೀಡದೇ ಅಧಿಕಾರಿಗಳು ಅನ್ಯಾಯ ಎಸಗುತ್ತಿದ್ದಾರೆ ಎಂದು ಅಲೆಮಾರಿ ಅಭಿವೃದ್ಧಿ ನಿಗಮದ ನಾಮನಿರ್ದೇಶಿತ ಸದಸ್ಯ ಮಂಜುನಾಥ ಜಿ.ಆಗೇರ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ನಿಯಮದ ಪ್ರಕಾರ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಯಾವುದೇ ಸೌಲಭ್ಯ ಪಡೆಯಲು ಫಲಾನುಭವಿಗಳ ಆಯ್ಕೆಯನ್ನು ನಾಮನಿರ್ದೇಶಿತ ಸದಸ್ಯರೇ ಮಾಡಬೇಕು. ಆದರೆ ಸಮಿತಿಯ ಕಾರ್ಯದರ್ಶಿ ಲಾಟರಿ ಮೂಲಕ ಫಲಾನುಭವಿಗಳನ್ನ ಆಯ್ಕೆ ಮಾಡಿದ್ದಾರೆ. ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ಮಾತ್ರ ಲಾಟರಿ ಮೂಲಕ ಆಯ್ಕೆ ಮಾಡುವ ಅವಕಾಶ ಇದೆ. ಈ ಬಗ್ಗೆ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಆಯ್ಕೆಯ ವಿಚಾರವಾಗಿಯೇ ನಾಲ್ಕು ಬಾರಿ ಸಮಿತಿಯ ಸಭೆ ಮುಂದೂಡಲಾಗಿದೆ. ಆದರೂ ಸರಕಾರದ ನಿಯಮವನ್ನು ಗಾಳಿಗೆ ತೂರಿ ಅಧಿಕಾರ ನಡೆಸುತ್ತಿದ್ದಾರೆ. ಇದರಿಂದ ಸರಕಾರ ಸೌಲಭ್ಯ ನೀಡಿದರೂ ಅಧಿಕಾರಿಗಳು ನೀಡದ ಪರಿಸ್ಥಿತಿ ಎದುರಾಗಿದೆ ಎಂದರು.
ಅಲೆಮಾರಿ ರಾಜ್ಯ ಸಂಘಟನೆಯ ಉಪಾಧ್ಯಕ್ಷೆ ಮಂಜುಳ ಮುಕ್ರಿ, ರಾಜ್ಯ ಸಂಘಟನೆಯ ಕಾರ್ಯದರ್ಶಿ ರವಿ ಮುಕ್ರಿ, ಮುಕ್ರಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್ ಮುಕ್ರಿ, ಶೇಕರ ಜೆ. ಹಳ್ಳೇರ ಹಾಗೂ ರಾಘವೇಂದ್ರ ಮುಕ್ರಿ ಇದ್ದರು.