ದಾಂಡೇಲಿ: ಜ್ಞಾನ, ವಿಜ್ಞಾನದ ದೃಷ್ಟಿಯಿಂದ ಇಂದು ವಿಶ್ವ ಕ್ಷಣಕ್ಷಣಕ್ಕೂ ಬೆಳೆಯುತ್ತಿದೆ. ವಿಶ್ವದಲ್ಲಾಗುವ ವಿದ್ಯಾಮಾನಗಳನ್ನು ನಿತ್ಯ ಅರಿತುಕೊಳ್ಳುವ ಜೊತೆಗೆ ಹೊಸ ಆಲೋಚನೆಗಳ ತುಡಿತ ವಿದ್ಯಾರ್ಥಿ- ಯುವಜನರಲ್ಲಿರಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ನುಡಿದರು.
ಅವರು ಕೆನರಾ ವೆಲ್ಫೆರ್ ಟ್ರಸ್ಟ್‌ನ ಆಶ್ರಯದಡಿ ನಗರದ ಜನತಾ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 10ನೇ ವರ್ಷದ ದಿ.ಪಿ.ಎಸ್.ಕಾಮತ್ ಸ್ಮರಣಾರ್ಥ ಅಂತರ್ ಕಾಲೇಜು ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಚರ್ಚಾ ಸ್ಪರ್ಧೆ ಎಂದರೆ ಅದು ಕೇವಲ ಸೋಲು- ಗೆಲುವಿಗಷ್ಟೇ ಅಲ್ಲ. ಸ್ಪರ್ದೆ ವಿದ್ಯಾರ್ಥಿಗಳಲ್ಲಿ ಓದಿನ ಅರಿವನ್ನು ಹೆಚ್ಚಿಸುತ್ತದೆ. ಬೌದ್ಧಿಕ ಶಕ್ತಿ ಮತ್ತು ಸಂವಹನ ಶಕ್ತಿಯನ್ನು ಬೆಳೆಸುತ್ತದೆ. ಚರ್ಚಾ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳನ್ನು ವಿದ್ಯಾರ್ಥಿ ಯುವ ಜನರಲ್ಲಿ ನಾಯಕತ್ವದ ಗುಣಗಳನ್ನು ಕೂಡ ಕಟ್ಟಿಕೊಡುತ್ತದೆ. ಹಾಗಾಗಿ ಇಂದು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಸಂಗತಿಗಳನ್ನು ಕೂಡ ತಿಳಿದುಕೊಳ್ಳುತ್ತ ನಿತ್ಯ ಓದುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಉಪನ್ಯಾಸಕ ಡಾ.ಪಿ.ವಿ.ಶಾನಭಾಗ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಕೂಡ ಆರೋಗ್ಯಕರವಾದ ಸ್ಪರ್ಧಾ ಮನೋಭಾವವಿರಬೇಕು. ಕೇವಲ ಚರ್ಚಾ ಸ್ಪರ್ಧೆಗಳಿಗಾಗಿ ಓದದೆ ಬದುಕಿನ ಜ್ಞಾನಾರ್ಜನೆಗಾಗಿಯೂ ಕೂಡ ಓದುವ ಹವ್ಯಾಸ ಇಟ್ಟುಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಜನತಾ ವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಇಟಗಿ ವಹಿಸಿದ್ದರು. ವೇದಿಕೆಯಲ್ಲಿ ಬಂಗೂರ ನಗರ ಪದವಿ ಕಾಲೇಜಿನ ಉಪನ್ಯಾಸಕ ಡಾ. ಎಸ್.ಎಸ್.ಹಿರೇಮಠ್, ಪ್ರಮುಖರಾದ ನಾಗರತ್ನ ಹೆಗಡೆ, ಜನತಾ ವಿದ್ಯಾಲಯ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯರಾದ ಎಂ.ಬಿ.ಅರವಳ್ಳಿ, ಇ.ಎಂ.ಎಸ್.ನ ಮುಖ್ಯ ಮುಖ್ಯಾಧ್ಯಾಪಕಿ ಸಕ್ಕು ಬಾಯಿ ಉಪಸ್ಥಿತರಿದ್ದರು.
ಕಾಲೇಜಿನ ದ್ವಿತೀಯ ದರ್ಜೆ ಸಹಾಯಕಿ ಶೀತಲ್ ಸಾವಂತ್ ಪ್ರಾರ್ಥಿಸಿದರು. ಉಪನ್ಯಾಸಕ ಯು. ಆರ್. ಘೋರ್ಪಡೆ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ದೀಪಾ ಗಸ್ತಿ ವಂದಿಸಿದರು. ಉಪನ್ಯಾಸಕಿ ನಿರುಪಮಾ ನಾಯಕ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಜಿ.ಎಸ್. ಹೆಗಡೆ ಮೊದಲಾದವರು ಸಹಕರಿಸಿರು. ‘ರಾಷ್ಟ್ರೀಯ ಭಾವೈಕ್ಯತೆಗೆ ಏಕರೂಪ ನಾಗರಿಕ ಸಂಹಿತೆ ಅಗತ್ಯವಿದೆ’ ಎಂಬ ವಿಷಯದ ಮೇಲೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಹಳಿಯಾಳ, ದಾಂಡೇಲಿ, ಯಲ್ಲಾಪುರ ತಾಲೂಕುಗಳ ವಿವಿಧ ಕಾಲೇಜುಗಳ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.