ಯಲ್ಲಾಪುರ: ಪಟ್ಟಣದ ಆಡಳಿತ ಸೌಧದ ಸಭಾಭವನದಲ್ಲಿ ಗುರುವಾರ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆಗೆ ಗುರುವಾರ ತಾಲೂಕು ತಹಶೀಲ್ದಾರ್ ಗುರುರಾಜ್ ಎಂ. ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಹಾಗೂ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲು ಯುವ ಸಂಸತ್ತು ಸಹಕಾರಿಯಾಗುತ್ತದೆ ಎಂದರು. ತಾಲೂಕ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್ ಮಾತನಾಡಿ, ಇಂದಿನ ಯುವಕರು ಆಡಳಿತಾತ್ಮಕ ರೀತಿ ನೀತಿಗಳನ್ನು ತಿಳಿದುಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಮಾತನಾಡಿದರು. ಯುವ ಸಂಸತ್ತು ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ಬೀಸಗೋಡಿನ ಶ್ರಿಯಾ ಶ್ರೀಧರ್ ಭಟ್ ಪ್ರಥಮ, ಪ್ರಸಾದಿನಿ ನರಸಿಂಹ ಭಟ್ ದ್ವಿತೀಯ, ಮೊರಾರ್ಜಿ ವಸತಿ ಶಾಲೆಯ ಲತಾ ಸಿದ್ದಿ ತೃತೀಯ, ಸರ್ಕಾರಿ ಪ್ರೌಢಶಾಲೆ ಬಿಸಗೊಡಿನ ಅಪೂರ್ವ ಕರುಮನೆ 4ನೇ ಸ್ಥಾನ ಹಾಗೂ ಕೆಪಿಎಸ್ ಕಿರವತ್ತಿಯ ಲಕ್ಷ್ಮಿ ಕಿರೆಹೊಸೂರು 5ನೇ ಸ್ಥಾನವನ್ನು ಪಡೆಯುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು.
ಸ್ಪರ್ಧೆಯ ನಿರ್ಣಾಯಕರಾಗಿ ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟ, ಉಪನ್ಯಾಸಕ ಶ್ರೀಪಾದ ಹೆಗಡೆ ಹಾಗೂ ರಾಜಾರಾಮ್ ವೈದ್ಯ ಪಾಲ್ಗೊಂಡಿದ್ದರು. ಸಮಾಜ-ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷೆ ನಾಗರತ್ನ ನಾಯಕ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಶ್ರೀಧರ ಹೆಗಡೆ ಸ್ಪರ್ಧೆ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಶಿಕ್ಷಕ ರಾಘವೇಂದ್ರ ಹೆಗಡೆ ಸ್ಪರ್ಧೆಯನ್ನು ನಡೆಸಿಕೊಟ್ಟರು ಹಾಗೂ ಯುವ ಸಂಸತ್ ಕಾರ್ಯಕ್ರಮದ ನೋಡಲ್ ಅಧಿಕಾರಿ ಪ್ರಶಾಂತ ಪಟಗಾರ ಸ್ವಾಗತಿಸಿ, ವಂದಿಸಿದರು.