ಕಾರವಾರ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಸರ್ಕಾರ ಸ್ಥಿರವಾಗಿದೆ. ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಸರ್ಕಾರ ಚೆನ್ನಾಗಿಯೇ ನಡೆಯುತ್ತಿದ್ದು, ಯಾವ ಶಾಸಕರಿಗೂ ಅಸಮಾಧಾನವಿಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಕೆಲ ಶಾಸಕರು ಸಭೆ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಇದರ ಅರ್ಥ ಸಿಎಂ, ಡಿಸಿಎಂ ಬದಲಾವಣೆ ಮಾಡುತ್ತಾರೆ ಎಂದಲ್ಲ. ಗೃಹ ಸಚಿವರು ಸಭೆ ನಡೆಸಿ ಸರ್ಕಾರದ ಹಿತದೃಷ್ಟಿಯಿಂದ, ಪಕ್ಷ ಹಿತದೃಷ್ಟಿಯಿಂದ ಒಳ್ಳೆಯ ಸಲಹೆಗಳನ್ನ ಕೊಡಬಹುದು ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಯಲ್ಲಿ ನಾಲ್ಕು ಗ್ಯಾರಂಟಿಯನ್ನ ಜಾರಿಗೆ ತಂದಿದ್ದೇವೆ. ಬಿಜೆಪಿ ಸರ್ಕಾರ ಹೋದ ನಂತರ ಸರ್ಕಾರದಲ್ಲಿ ಹಣಕಾಸಿರ ಪರಿಸ್ಥಿತಿ ಸರಿ ಇರಲಿಲ್ಲ. ನಾವು ಗ್ಯಾರಂಟಿ ಕೊಟ್ಟ ನಂತರ ಸಾಕಷ್ಟು ಹಣ ನೀಡಬೇಕು. ಈ ಹಿನ್ನಲೆಯಲ್ಲಿ ಅಭಿವೃದ್ದಿಗೆ ಹಣದ ಕೊರತೆ ಇರುತ್ತದೆ. ಈ ಬಗ್ಗೆ ಚರ್ಚೆ ಸಹ ಸಿಎಂ ಜೊತೆ ಮಾಡಿದ್ದೇವೆ. ನವೆಂಬರ್, ಡಿಸೆಂಬರ್ ಒಳಗಾಗಿ ಪ್ರತಿ ಕ್ಷೇತ್ರದಲ್ಲಿ ಅಭಿವೃದ್ದಿ ಚಟುವಟಿಕೆಗಾಗಿ ಹಣವನ್ನ ಸಿಎಂ ಕೊಡಲಿದ್ದಾರೆ. ಸರ್ಕಾರ ಬಲ ಪಡಿಸುವ ಕೆಲಸವನ್ನ ಎಲ್ಲರೂ ಮಾಡಬೇಕಾಗಿದೆ. ನಾವೆಲ್ಲ ಒಟ್ಟಾಗಿ ಇದ್ದೇವೆ ಎಂದರು.