ಹಳಿಯಾಳ: ವಿದ್ಯಾರ್ಥಿಗಳು ಔಧ್ಯಮಿಕ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಉತ್ತಮ ಉದ್ಯಮಿಯಾಗಿ ಹೊರಹೊಮ್ಮುವಂತೆ ಬೆಳಗಾವಿಯ ಬೆಲ್ಕೋರ್ ಇಂಡಸ್ಟ್ರೀಸ್‌ನ ಮಾಲಿಕ ಶ್ರೀಕಾಂತ್ ಮಾನೆ ಕರೆನೀಡಿದರು.
ಪಟ್ಟಣದ ಕೆಎಲ್‌ಎಸ್ ವಿಡಿಐಟಿ ಮಹಾವಿದ್ಯಾಲಯದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಕೆ- ಟೆಕ್ ನೈನ್ ವತಿಯಿಂದ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಪದವಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಉದ್ಯಮಶೀಲತೆಗೆ ಪ್ರೋತ್ಸಾಹಿಸುವ ಯುವ ಉದ್ಯಶೀಲತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನವ ಉದ್ಯಮದ ಪ್ರಾರಂಭದ ಹಂತದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ವಿಧಾನವನ್ನು ವಿವರಿಸಿದರು. ಭಾರತ ಸರ್ಕಾರವು ನವ ಉದ್ಯಮವನ್ನು ಪ್ರಾರಂಭಿಸಲು ನೀಡುತ್ತಿರುವ ಸವಲತ್ತುಗಳ ವಿವರವನ್ನು ನೀಡಿದರು. ಉದ್ಯಮಶೀಲ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಸಹಕಾರಿಯಾಗುವಂತೆ ಖಾಸಗಿ ಸಂಸ್ಥೆಗಳು ತರಬೇತಿಯನ್ನು ನೀಡುತ್ತಿದ್ದು, ಇವುಗಳ ಪ್ರಯೋಜನ ಪಡೆದುಕೊಂಡು ಉತ್ತಮ ಉದ್ಯಮಶೀಲರಾಗಿ ಉದ್ಯೋಗ ಸೃಷ್ಟಿಗೆ ಕಾರಣೀಭೂತರಾಗಬೇಕೆಂದು ಹೇಳಿದರು.
ಹವಗಿ ಸರ್ಕಾರಿ ಪದವಿ ವಿದ್ಯಾಲಯದ ಪ್ರಾಂಶುಪಾಲ ಡಾ.ಚಂದ್ರಶೇಖರ್ ಲಮಾಣಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಡಿಐಟಿ ಮಹಾವಿದ್ಯಾಲಯದ ಆಡಳಿತ ವಿಭಾಗದ ಡೀನ್ ಪ್ರೊ.ಮಂಜುನಾಥ ಡಿ., ವಿದ್ಯಾರ್ಥಿಗಳು ತಮ್ಮ ಸೃಜನಶೀಲ ಚಿಂತನೆಯಿಂದ ಸಮಾಜಕ್ಕೆ ಕೊಡಗೆ ನೀಡುವ ಉದ್ಯಮಿಯಾಗುವಂತೆ ಕರೆ ನೀಡಿದರು.
ಕೆ-ಟೆಕ್ ನೈನ್‌ನ ಸಂಚಾಲಕ ಡಾ.ಕೆ.ಎಸ್.ಪೂಜಾರ್ ಯುವ ಉದ್ಯಶಿಲತೆ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಪ್ರತೀಕ್ ಲಾಡ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೆ- ಟೆಕ್ ನೈನ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.