ಯಲ್ಲಾಪುರ: ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ನೀಡಬೇಕು. ಮೌಢ್ಯಗಳಿಂದಾಗಿ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದೆ. ಹೆಣ್ಣು ಇಂದು ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದಾಳೆ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಬಾಯಿ ಪಾಟೀಲ ಹೇಳಿದರು.
ಅವರು ಗುರುವಾರ ಕಿರವತ್ತಿಯ ಕೆಪಿಎಸ್ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಹಾಗೂ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಹೆಣ್ಣುಮಕ್ಕಳ ಹಿತರಕ್ಷಣೆ ಮಾಡುವ ಕಾನೂನುಗಳಿವೆ. ಬದುಕುವ ಹಕ್ಕು, ಸಮಾನ ಅವಕಾಶದ ಹಕ್ಕು, ಆರೋಗ್ಯದ ಹಕ್ಕು, ಬಾಲ್ಯವಿವಾಹ ತಡೆ ಕಾಯಿದೆ ಹೀಗೆ ಹಲವಾರು ಅವಕಾಶಗಳು ಹೆಣ್ಣುಮಕ್ಕಳ ಅಭಿವೃದ್ದಿಗಾಗಿಯೇ ಇರುತ್ತವೆ. ಹೆಣ್ಣುಮಕ್ಕಳ ರಕ್ಷಣೆ ಎಲ್ಲರ ಹೊಣೆಯಾಗಿದೆ. ಹೆಣ್ಣುಮಕ್ಕಳ ರಕ್ಷಣೆಗಾಗಿ ಸಮಾಜದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹೆಣ್ಣುಮಗುವಿನ ದಿನಾಚರಣೆ ಮುಖ್ಯವಾಗುತ್ತದೆ. ಎಂದರು.
ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಜಿ.ಭಟ್ ಮಾತನಾಡಿ, ಹೆಣ್ಣುಮಕ್ಕಳ ರಕ್ಷಣೆಗಾಗಿ ಇರುವ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ನ್ಯಾಯವಾದಿ ಎನ್.ಟಿ.ಗಾಂವ್ಕಾರ ಬಾಲ್ಯವಿವಾಹ ನಿಷೇಧ ಕಾಯಿದೆ ಕುರಿತಾಗಿ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಜೀನತ್ ಬಾನು ಶೇಖ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಫೀಕಾ ಹಳ್ಳೂರು, ಶಿಕ್ಷಣ ಸಂಯೋಜಕ ಪ್ರಶಾಂತ ಹೆಗಡೆ, ಪೊಲೀಸ್ ಇಲಾಖೆಯ ಶ್ಯಾಮ್ ಪಾವಸ್ಕರ, ಶಿಕ್ಷಕರಾದ ಅಜಯ್ ನಾಯಕ, ನಾರಾಯಣ ಕಾಂಬಳೆ, ತಾ.ಪಂ. ನ ಮಂಜುನಾಥ ಆಗೇರ, ಕಿರವತ್ತಿ ಪಿಡಿಒ ಮುಂತಾದವರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕಾ ದಂಡಾಧಿಕಾರಿಗಳಾದ ಗುರುರಾಜ. ಎಮ್. ವಹಿಸಿದ್ದರು. ಕೆ.ಪಿ.ಎಸ್. ಪ್ರೌಢಶಾಲೆಯ ಮುಖ್ಯಾಧ್ಯಾಪಕ ಜನಾರ್ದನ ಗಾಂವ್ಕಾರ ಸ್ವಾಗತಿಸಿದರು. ಶಿಕ್ಷಕ ಸುಧಾಕರ ನಾಯಕ ಕಾರ್ಯಕ್ರಮ ನಿರೂಪಿಸಿದರು.