ಕುಮಟಾ: ಬೀದಿಬದಿ ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಸುಗಮಗೊಳಿಸಲು ಬ್ಯಾಂಕುಗಳಿಂದ ಪೂರೈಸಲಾದ ಕ್ಯೂಆರ್ ಕೋಡನ್ನು ತಪ್ಪದೇ ಬಳಸಬೇಕೆಂದು ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಕರೆ ನೀಡಿದರು.
ಅವರು ಇಲ್ಲಿಯ ಪುರಸಭೆ ಆವರಣದಲ್ಲಿ ಪಟ್ಟಣ ಮಾರಾಟ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಹೊರಜಿಲ್ಲೆ ತಾಲ್ಲೂಕುಗಳಿಂದ ಆಗಮಿಸುವ ಬೀದಿ ಬದಿ ವ್ಯಾಪಾರಸ್ಥರಿಗೂ ಇಲ್ಲಿಯೇ ರೇಶನ್ ಪೂರೈಸುವ ಯೋಜನೆಯನ್ನು ಅವರು ತಿಳಿಸಿದರಲ್ಲದೇ ಬೀದಿ ವ್ಯಾಪಾರಸ್ಥರು ಹಾಗೂ ಕುಟುಂಬದಸ್ಥರಿಗೆ ಅನ್ವಯಿಸುವ ಎಂಟು ಪ್ರಮುಖ ಯೋಜನೆಗಳ ಬಗ್ಗೆ ಅವರು ವಿಸ್ತ್ರತವಾಗಿ ವಿವರಿಸಿದರು. ಯೋಜನೆಯ ಸಂಘಟಕರಾದ ಮೀನಾಕ್ಷಿ ಆಚಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಿ.ಎಂ. ಶ್ರಮಯೋಗಿ ಮಾನ್-ಧನ್ ಯೋಜೆನಗೆ 66, ಪಿ.ಎಂ. ಸುರಕ್ಷಾ ಭೀಮಾ ಯೋಜನೆಗೆ 504, ವಿ.ಎಂ. ಜನ-ಧನ ಯೋಜನೆಗೆ 274, ಪಿ.ಎಂ. ಜೀವನಜ್ಯೋತಿ ಭೀಮಾ ಯೋಜನೆಗೆ 11, ಒಂದು ದೇಶ ಒಂದು ರೇಶನ್ ಕಾರ್ಡ್ 10, ಕಾರ್ಮಿಕ ಇಲಾಖೆಯಡಿ 25 ಫಲಾನುಭವಿಗಳನ್ನು ಈ ವರೆಗೆ ಗುರುತಿಲಾಗಿದ್ದು, 388 ಜನರಿಗೆ ಸಾಲ ಯೋಜನೆ ಕಲ್ಪಿಸಲಾಗಿದೆ ಎಂದು ಮೀನಾಕ್ಷಿ ಆಚಾರಿ ಸಭೆಯ ಗಮನಕ್ಕೆ ತಂದರು.
ಸರಕಾರದ ಕಾರ್ಯಯೋಜನೆಗಳನ್ನು ಸರಿಯಾದ ಕ್ರಮದಲ್ಲಿ ಅನುಷ್ಠಾನಗೊಳಿಸುವಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ತಲುಪಿಸುವ ನಿಟ್ಟಿನಲ್ಲಿ ಪುರಸಭೆ ಕೈಗೊಳ್ಳುತ್ತಿರುವ ಉಪಕ್ರಮಗಳ ಬಗ್ಗೆ ರೋಟರಿ ಅಧ್ಯಕ್ಷ ಎನ್.ಆರ್.ಗಜು ಶ್ಲಾಘಿಸಿದರು. ಅಂಗನವಾಡಿ ಸಹಾಯಕರು ಈ ಯೋಜನೆಯ ಫಲಾನುಭವಿಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದನ್ನು ಸಿಐಟಿಯು ಕಾರ್ಯದರ್ಶಿ ಗೀತಾ ನಾಯ್ಕ ತಿಳಿಸಿದರು. ಕಾವೇರಿ ಮಹಾದೇವ ಪಟಗಾರ, ರವಿಶಂಕರ ಗುನಗಾ, ರಾಘವೇಂದ್ರ ಶೆಟ್ಟಿ, ಶೇಷಗಿರಿ ಹರಿಕಾಂತ, ಗಣಪಿ ಸುರೇಶ್ ಗೌಡ ಮೊದಲಾದ ಬೀದಿ ಬದಿ ವ್ಯಾಪಾರಸ್ಥರು ಸೂಕ್ತ ಸಲಹೆಯನ್ನು ಪಡೆದರು.