ಜೊಯಿಡಾ: ಸಪ್ತಸ್ವರ ಸೇವಾ ಸಂಸ್ಥೆ, ಕೀರ್ತಿ ಮಹಿಳಾ ಮಂಡಳ, ಯಕ್ಷ ಕಲಾಭಿಮಾನಿಗಳು ಗುಂದ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಡಿಯಲ್ಲೊಂದು ಯಕ್ಷ ಉತ್ಸವ ಕಾರ್ಯಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುಂದದಂತಹ ಹಳ್ಳಿಗಾಡಿನ ಪ್ರದೇಶದಲ್ಲಿ ಮಹಿಳೆಯರೆ ಸೇರಿ ಏಳು ದಿನಗಳ ಕಾಲ ಯಕ್ಷಗಾನ ಮಾಡುತ್ತಿರುವುದು ಸಂತಸದ ಸಂಗತಿ. ಕಾಡಿನ ಪ್ರದೇಶವಾದರು ಎಲ್ಲಾ ವ್ಯವಸ್ಥೆಗಳನ್ನು ಕಲಾವಿದರಿಗೆ ಕಲ್ಪಿಸಿ, ಜನರಿಗೆ ಮನರಂಜನೆ ನೀಡುತ್ತಿರುವ ಈ ಸಂಸ್ಥೆ ಕಾರ್ಯ ಶ್ಲಾಘನೀಯ, ರಾಮಾಯಣ ಮತ್ತು ಮಹಾಭಾರತದಂತಹ ಪೌರಾಣಿಕ ಯಕ್ಷಗಾನಗಳು ಇತ್ತಿಚಿಗೆ, ಕಡಿಮೆಯಾಗುತ್ತಿದೆ ಚಲನಚಿತ್ರದಂತೆ ಯಕ್ಷಗಾನ ಮೂಡಿ ಬಂದರೆ ಯಕ್ಷಗಾನ ತನ್ನ ವ್ಯಕ್ತಿತ್ವ ಕಳೆದುಕೊಳ್ಳುತ್ತವೆ, ಆದರೆ ಇಲ್ಲಿ ಪೌರಾಣಿಕ ಯಕ್ಷಗಾನ ಮಾಡುತ್ತಿರುವುದು ಉತ್ತಮ ಬೆಳವಣಿಗೆ, ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿರುವುದು ಸಂತಸ ಎಂದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀಕೃಷ್ಣ ಹೆಗಡೆ ಮತ್ತು ಕಲಾವಿದರಾದ ರಾಧಾ ದೇಸಾಯಿ, ಉಮೇಶ ದೇಸಾಯಿ ಅವರಿಗೆ ಗೌರವ ಸನ್ಮಾನ ನೀಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ವಾನ್ ಶ್ರೀಕೃಷ್ಣ ಹೆಗಡೆ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಊರೇ ಸ್ವರ್ಗ, ತನ್ನೂರಿನಲ್ಲಿ ನನಗೆ ಸತ್ಕರಿಸಿದ್ದು ಸಂತೋಷ, ಪತ್ರಿಯೊಬ್ಬರಿಗೂ ಗುರಿ ಮತ್ತು ಗುರು ಇರಲೇ ಬೇಕು. ಯಕ್ಷಗಾನ ಎಂಬುದು ಇತ್ತಿಚಿನ ದಿನಗಳಲ್ಲಿ ನಶಿಸಿ ಹೋಗುತ್ತಿದೆ, ರಾಮಾಯಣದಲ್ಲಿ ಬರುವ ರಾಮನ ಮಹಾಭಾರತದಲ್ಲಿ ಬರುವ ಕೃಷ್ಣನ ಗುಣಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗೆದ್ದಾಗ ಬೀಗದೆ ಸೋತಾಗ ಕುಗ್ಗದೇ ಜೀವನ ನಡೆಸುವುದನ್ನು ಎಲ್ಲರು ಕಲಿಯಬೇಕು. ಕಳೆದ 20 ವರ್ಷಗಳಿಂದ ಸಪ್ತಸ್ವರ ಸಂಸ್ಥೆ ನಡೆಸಿಕೊಂಡು ಬಂದ ಸಂಸ್ಥೆಯ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ವಿ.ದಾನಗೇರಿ ಮಾತನಾಡಿ ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಜೀವನದಲ್ಲಿ ಅತ್ಯಗತ್ಯ. ಸಮಾಜದ ಏಳಿಗೆ ಒಬ್ಬನಿಂದ ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಸಮಾಜದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸಪ್ತಸ್ವರ ಸಂಸ್ಥೆ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಅವೇಡಾ ಗ್ರಾ.ಪಂ. ಸದಸ್ಯ ಅಜಿತ್ ಥೋರವತ್, ಅಮರಾ ಹೋಮ ಸ್ಟೇ ಮಾಲಿಕ ಆರ್.ಎನ್.ಹೆಗಡೆ, ಪ್ರಸಾದ ಆಳ್ಕೆ, ಉಮೇಶ ದೇಸಾಯಿ,ರಾಧಾ ದೇಸಾಯಿ, ರೇಖಾ ಉಪಾಧ್ಯ, ಸಪ್ತಸ್ವರ ಸೇವಾ ಸಂಸ್ಥೆ ಅಧ್ಯಕ್ಷೆ ಸುಮಂಗಲಾ ದೇಸಾಯಿ ಇತರರು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ಬಾಣಾಸುರ ಕಾಳಗ ಯಕ್ಷಗಾನ ಜನರನ್ನು ರಂಜಿಸಿತು.