ಅಂಕೋಲಾ: ತಾಲೂಕಿನ ಅಗಸೂರಿನ ಶ್ರೀಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಕರ್ಣಾವಸಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಾಳಾ ಗೌಡ ಶಿರ್ವೆ ಹಾಗೂ ಮೃದಂಗ ವಾದಕರಾಗಿ ಪಾಂಡುರಂಗ ಗೌಡ ಶಿರಗುಂಜಿ ಕಾರ್ಯನಿರ್ವಹಿಸಿದರು.
ಕರುಣಾರಸ ಪೂರ್ಣವಾಗಿ ಕರ್ಣನ ಪಾತ್ರ ನಿರ್ವಹಿಸಿದ ಗೌರೀಶ ನಾಯಕ ಶಿರಗುಂಜಿಯವರ ಮಾತು ನೆರೆದಿದ್ದ ಪ್ರೇಕ್ಷಕರ ಕಣ್ಣನ್ನು ತೇವಗೊಳಿಸಿತು. ಶಲ್ಯನ ಪಾತ್ರದಲ್ಲಿ- ದೇವಿದಾಸ ನಾಯಕ ಅಡ್ಡಬೋಳೆ, ಕೃಷ್ಣ- ಗಣಪತಿ ಹೆಗಡೆ ತಗ್ಗನಗದ್ದೆ, ಅರ್ಜುನ- ಗೋವಿಂದ್ರಾಯ ನಾಯ್ಕ ಹಿಲ್ಲೂರು, ಬ್ರಾಹ್ಮಣ- ರಾಧಾಕೃಷ್ಣ ನಾಯಕ, ಅಶ್ವಸೇನ- ಸತೀಶ ಭಟ್ಟ ಅಂಗಡಿಬೈಲ್ ನಿರ್ವಹಿಸಿದರು.
ಪ್ರತಿ ಪಾತ್ರಧಾರಿಯು ತಮ್ಮ ಪಾತ್ರ ಪೋಷಣೆ ಮಾಡುವುದರೊಂದಿಗೆ ಕಾರ್ಯಕ್ರಮ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಅಗಸೂರ, ಶಿರಗುಂಜಿ, ಹೊನ್ನಳ್ಳಿ ಈ ಪರಿಸರದಲ್ಲಿ ಈ ಸಂಘಟನೆಯ ಸ್ಥಳೀಯ ಕಲಾವಿದರಿಂದ ಆಗಾಗ ತಾಳಮದ್ದಲೆ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಇದು ನಶಿಸುತ್ತಿರುವ ನಮ್ಮ ಪ್ರಾಚೀನ ಕಲೆಯನ್ನು ಸಂರಕ್ಷಿಸುವಲ್ಲಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯಾಗಿರುತ್ತದೆ.