ಮಂಗಳೂರು: ಪೆಟ್ಟುಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ವಿಘ್ನಗಳು ಬದುಕಿನ ಅವಿಭಾಜ್ಯ ಅಂಗ. ಇದನ್ನು ಧೈರ್ಯದಿಂದ ಎದುರಿಸಿದವನು ಬದುಕಿನಲ್ಲಿ ಯಶಸ್ವಿಯಾಗುತ್ತಾನೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಎಂಟನೇ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು. ವಿಘ್ನಕ್ಕೆ ಭಯಪಟ್ಟು ಕಾರ್ಯದಿಂದ ವಿಮುಖನಾಗುವವನು ಬದುಕಿನಲ್ಲಿ ಸೋಲುತ್ತಾನೆ. ವಿಘ್ನಗಳು ಬಂದರೂ ತಮ್ಮ ಕಾರ್ಯಸಾಧನೆ ಮಾಡುವವರು ಉತ್ತಮರು; ಇದಕ್ಕೆ ಹೆದರಿ ಪಲಾಯನ ಮಾಡುವವರು ಸೋಲುತ್ತಾರೆ. ಒಂದು ಶ್ರೇಯಸ್ಸು ಪ್ರಾಪ್ತವಾಗಲು ಅರ್ಹತೆಯ ಪರೀಕ್ಷೆ ಆಗುತ್ತದೆ. ವಿಘ್ನಗಳು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ವಿಶ್ಲೇಷಿಸಿದರು.
ನಂಬಿದ ತಾಯಿ ನಮ್ಮನ್ನು ಕಾಪಾಡುತ್ತಾಳೆ ಎಂಬ ನಂಬಿಕೆ, ಶ್ರದ್ಧೆ ಬೇಕು. ಅದರಂತೆ ದೇವೇಂದ್ರ ಮಾತ್ರ ವ್ರತದಿಂದ ಮೇಲೇಳಲಿಲ್ಲ. ಬದಲಾಗಿ ಎದ್ದು ಓಡುತ್ತಿರುವವರಿಗೆ ಸಂದೇಶವನ್ನು ನೀಡುತ್ತಾನೆ. ಯುದ್ಧದಿಂದ ಅಸುರರನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಉಪಾಸನೆಯಿಂದ ಗೆಲ್ಲಬಹುದು ಎಂದು ಪ್ರೇರಣೆ ನೀಡುತ್ತಾನೆ. ಇಡೀ ತಂಡಕ್ಕೆ ಪ್ರೇರಣೆ ನೀಡುವುದು ನಾಯಕತ್ವದ ಗುಣ ಎಂದು ಹೇಳಿದರು.
ವಿಶ್ವೇಶ್ವರ ಭಟ್ ಉಂಡೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘ ಪರಿವಾರದ ನೇತಾರ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಬಿಜೆಪಿ ಮುಖಂಡ ಸತೀಶ್ ಕುಂಪಲ. ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ್ ಕೆದ್ಲ, ಮಂಗಳೂರು ಮಂಡಲ ಅಧ್ಯಕ್ಷ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ವಿದ್ಯಾಸಾರಥಿ ಯುಎಸ್‌ಜಿ ಭಟ್, ಕೆ.ಟಿ.ಶೈಲಜಾ ಭಟ್ ಮತ್ತಿತರರು ಉಪಸ್ಥಿತರಿದ್ದರು.