ಹೊನ್ನಾವರ: ಕೆರೆ ಮತ್ತು ಮನೆ ಒಂದೇ ಸಲ ಬರಿದಾದ ಭಾವ ಸೃಷ್ಠಿಯಾಗಿ ಯಕ್ಷಗಾನ ಕ್ಷೇತ್ರಕ್ಕೆ ಅಭಾವದ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮತ್ತೆ ಸೃಷ್ಠಿಸುವ ಜವಾಬ್ದಾರಿ ವರ್ತಮಾನ ಕಲಾವಿದರದ್ದಾಗಿದೆ ಎಂದು ಹಿರಿಯ ಅರ್ಥಧಾರಿಗಳು, ಕಲಾ ತಜ್ಞರೂ ಆದ ಶ್ರೀಧರ ಡಿ.ಎಸ್.ಕಿನ್ನಿಗೋಳಿ ಅಭಿಪ್ರಾಯಪಟ್ಟರು.
ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ಆಯೋಜಿಸಲ್ಪಟ್ಟ ಡಾ.ಕೆರೆಮನೆ ಮಹಾಬಲ ಹೆಗಡೆ ಮತ್ತು ಕೆರೆಮನೆ ರಾಮ ಹೆಗಡೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಕ್ಷಗಾನ ಕ್ಷೇತ್ರದಲ್ಲಿ ಪ್ರಜ್ಞಾವಂತ ಪ್ರೇಕ್ಷಕರ ಸೃಷ್ಠಿಯೇ ಪಾತ್ರದ ಸತ್ವವಾಗಿದೆ ಎಂದು ದೃಷ್ಠಾಂತದ ಮೂಲಕ ವಿವರಿಸಿದರು.
ಬಿಡುಗಡೆಯಾದ ಎಲ್.ಎಸ್.ಶಾಸ್ತ್ರಿಯವರು ಬರೆದ ಯಕ್ಷಗಾನ ರಂಗಪ್ರಜ್ಞೆಯನ್ನು ಪ್ರಶಂಸಿಸುತ್ತಾ, ಕೆರೆಮನೆ ಕುಟುಂಬದ ‘ಯಕ್ಷಗಾನ ಮಹಾಗ್ರಂಥ’ ಪ್ರಕಟವಾಗಬೇಕೆಂದು ಆಶಿಸಿದರು. ಎಲ್.ಎಸ್.ಶಾಸ್ತ್ರಿಯವರು ಬರೆದ ‘ಯಕ್ಷಗಾನ ರಂಗಪ್ರಜ್ಞೆ’ ಕೃತಿಯನ್ನು ಸಭಾಧ್ಯಕ್ಷ ಶ್ರೀಧರ ಡಿ.ಎಸ್.ಕಿನ್ನಿಗೋಳಿ ಲೋಕಾರ್ಪಣೆಗೊಳಿಸಿದರು.
ಚಿಂತಕ ಸಾಲೆಬೈಲ್ ನಾರಾಯಣ ಯಾಜಿಯವರು ಯಕ್ಷಗಾನ ರಂಗಪ್ರಜ್ಞೆ ಕೃತಿಯನ್ನು ಪರಿಚಯಿಸುತ್ತಾ, ಪ್ರಜ್ಞೆ ಎನ್ನುವುದು ಜಾಗೃತವಾದರೂ ಅದನ್ನು ನಿಭಾಯಿಸುವ ಹೊಣೆಗಾರಿಕೆಯೂ ಅರಿವಾಗುತ್ತದೆ. ಅಭಿನಯ ಎಂದರೆ ಪಾತ್ರಗಳಲ್ಲಿ ಮುಳುಗಿ ಹೊಗುವುದಲ್ಲ, ಪಾತ್ರಗಳನ್ನು ಸೃಷ್ಠಿಸುವುದಾಗಿದೆ. ಮಹಾಬಲ ಹೆಗಡೆಯವರ ಇನ್ನೂರಕ್ಕೂ ಹೆಚ್ಚು ಪಾತ್ರಗಳ ವಿವರಣೆಗಳಿರುವ ಕೃತಿ ಇದಾಗಿದೆ. ಅಂತೆಯೇ ಮಹಾಬಲರ ಬದುಕಿನ ಚಿತ್ರಣವೂ ರಂಗಕ್ಕೆ ಅರ್ಪಿತವಾದ ವಿಶ್ಲೇಷಣೆ ಬಹು ಸುಂದರವಾಗಿ ಮೂಡಿಬಂದಿದೆ. ಮಹಾಬಲರ ಬದುಕಿನ ಸಮಗ್ರ ರಂಗ ಚಿಂತನೆ ಮತ್ತು ಧೋರಣೆ ಪುಸ್ತಕದ ಎರಡನೇ ಭಾಗದಲ್ಲಿ ಇದ್ದು ಅವರ ಬದುಕಿನ ಎಲ್ಲಾ ಆಯಾಮಗಳನ್ನು ಹಿರಿಯ ಪತ್ರಕರ್ತ ಲಕ್ಷ್ಮಿನಾರಾಯಣ ಶಾಸ್ತ್ರಿ ನಿರೂಪಿಸಿಕೊಟ್ಟಿದ್ದಾರೆ. ಭಾರತೀಯ ಕಲೆಗಳ ಸ್ವರೂಪವನ್ನು ಅರಿಯಲೂ ಈ ಕೃತಿ ಸಹಕಾರಿ ಎಂದೂ ಭಿಪ್ರಾಯಪಟ್ಟರು.
ಹಿರಿಯ ಭಾಗವತರಾದ ತ್ರಯಬಂಕ ಹೆಗಡೆ ಇಡುವಾಣಿ ಇವರಿಗೆ ಈ ವರ್ಷದ ಡಾ.ಮಹಾಬಲ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಳ್ಕೋಡ ಎನ್.ಜಿ.ಭಟ್ಟ ಪ್ರಶಸ್ತಿ ಪತ್ರ ವಾಚಿಸಿದರು. ಪ್ರಶಸ್ತಿ ಪುರಸ್ಕೃತ ಇಡುವಾಣಿ ಯವರು ಮನದಾಳದ ಮಾತನ್ನು ವ್ಯಕ್ತ ಪಡಿಸುತ್ತಾ ಮಹಾಬಲ ಹೆಗಡೆಯವರು ಯಕ್ಷಗಾನದ ವಿಶ್ವಕೋಶ ಎಂದು ಹೇಳುತ್ತಾ ಅವರ ಸದಾ ಅಧ್ಯಯನ ಶೀಲತ್ವ, ಚಿಂತನಾ ರೀತಿ ಮತ್ತು ಶಾಸ್ತ್ರಿಯ ಅನುಕರಣೆ ಕಲಾವಿದರಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಪತ್ರಕರ್ತ ಎಲ್.ಎನ್.ಶಾಸ್ತ್ರಿ, ಮಹಾಬಲ ಹೆಗಡೆಯವರು ನನ್ನ ಒಡನಾಡಿಯಾಗಿ, ಬಂಧುವಾಗಿ ಮತ್ತು ಗೆಳೆಯನಾಗಿ ಅವರೊಂದಿಗೆ ಸಂವಾದ ಮಾಡುವ ಭಾಗ್ಯ ನನಗೆ ದೊರೆತದ್ದು ಅನನ್ಯ ಅನುಭವ ಎಂದರು. ಸ್ನಾತಕೋತರ ಪದವಿ ಪಡೆಯದ ವ್ಯಕ್ತಿಯ ಮೇಲೆ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ದೊರೆತಿರುವುದು ಮತ್ತು ಸ್ವತಃ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರದಾನವಾಗಿರುವುದು ಡಾ.ಮಹಾಬಲ ಹೆಗಡೆಯವರ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿದೆ. ಕಲೆಯಲ್ಲಿ ಧ್ಯಾನಾಸಕ್ತರಾಗುವ ವಿಶಿಷ್ಟ ಸಾಮರ್ಥ್ಯ ಡಾ.ಮಹಾಬಲ ಹೆಗಡೆಯವರದ್ದಾಗಿತ್ತು. ಇಂದು ಲೋಕಾರ್ಪಣೆಗೊಂಡ ನಾ ಬರೆದ ಪುಸ್ತಕ ಹೊಸ ಪೀಳಿಗೆಗೆ ದಾರಿ ದೀಪವಾಗಲಿದೆ ಎಂದು ತಿಳಿಸುತ್ತಾ ಸುಧೋರಣೆಯ ಸುಧಾರಣೆ ಯಕ್ಷಗಾನಕ್ಕೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕೆರೆಮನೆ ಶಿವಾನಂದ ಹೆಗಡೆಯವರು ಮಾತನಾಡುತ್ತಾ, ಯಕ್ಷಗಾನದಲ್ಲಿ ಪ್ರೇಕಕ, ಸಂಘಟಕ ಮತ್ತು ಕಲಾವಿದ ಇವರ ಸಂಗಮ ಪವಿತ್ರವಾಗಿರ ಬೇಕಾದರೆ ಸ್ಪರ್ದೆಗಳಿರಬಾರದು ಮತ್ತು ಪರಂಪರಾಗತ, ವಸ್ತುನಿಷ್ಠ ಮತ್ತು ರಂಗಪ್ರಜ್ಞೆ ಆಧಾರಿತವಾಗಿರಬೇಕು ಎಂದರು. ಗಣೇಶ ಯಾಜಿ ಮಾವಿನಕೆರೆ ಗಣಪತಿ ಸ್ತುತಿಯೊಂದಿಗೆ ಸಭಾ ಕಾರ್ಯಕ್ರಮ ಪುಷ್ಪ ನಮನ, ದೀಪ ಬೆಳಗುವಿಕೆಯಿಂದ ಆರಂಭಗೊಂಡಿತು. ಕೆರೆಮನೆ ಶಶಾಂಕ ಹೆಗಡೆ ಸ್ವಾಗತಿಸಿದರು. ಕೆರೆಮನೆ ಕಿಶೋರ ಹೆಗಡೆ ವಂದಿಸಿದರು. ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವ ಅಧ್ಯಕ್ಷ್ಷೆ ಕೆರೆಮನೆ ನಾಗವೇಣಿ ಹೆಗಡೆ ಉಪಸ್ಥಿತರಿದ್ದರು. ಕೆರೆಮನೆ ಎಲ್.ಎಂ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಮರಣೆಯ ಪ್ರಯುಕ್ತ ಕಾರ್ಯಕ್ರಮದ ನಂತರ ಮಹಾಬಲ ಹೆಗಡೆಯವರ ಮೊಮ್ಮಕ್ಕಳಾದ ಶಶಾಂಕ, ಕಿಶೋರ ಮತ್ತು ಪ್ರತಿಷ್ಠಾನದ ಸದಸ್ಯರಿಂದ ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು.