ಕಾರವಾರ: ಇಸ್ರೇಲ್‌ನಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು, ಉದ್ಯೋಗಕ್ಕೆಂದು ಅಲ್ಲಿಗೆ ತೆರಳಿದ್ದ ಪತ್ನಿಯ ಸ್ಥಿತಿಯನ್ನು ನೆನೆದು ನಗರದ ಆಟೋ ಚಾಲಕನೋರ್ವ ಬೇಸರ ವ್ಯಕ್ತಪಡಿಸಿದ್ದಾನೆ.
ಬೈತ್‌ಕೋಲ್ ನಿವಾಸಿಯಾಗಿರುವ ಆಟೋ ಚಾಲಕ ರೋಝಾರ್ ಲೂಪಿಜ್‌ನ ಪತ್ನಿ ಕ್ರಿಸ್ತ್ಮಾ ಇಸ್ರೇಲ್‌ನ ತೆಲವಿಯಲ್ಲಿ ಕಳೆದ 7 ವರ್ಷಗಳಿಂದ ಹೋಂ ನರ್ಸಿಂಗ್ ಕೆಲಸ ಮಾಡುತ್ತಿದ್ದು, ಎರಡು ವರ್ಷಕ್ಕೊಮ್ಮೆ ಕಾರವಾರಕ್ಕೆ ಬಂದು ಹೋಗುತ್ತಿದ್ದರಂತೆ. ಈ ವರ್ಷದ ಜನವರಿಯಲ್ಲೂ ಬಂದು ಹೋಗಿದ್ದು, ಇದೀಗ ಇಸ್ರೇಲ್‌ನಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಪತ್ನಿಯ ಸುರಕ್ಷತೆಯ ಬಗ್ಗೆ ಪತಿ ರೋಝಾರ್ ಆತಂಕಗೊಂಡಿದ್ದಾನೆ.
ಸಂಕಷ್ಟ ದಲ್ಲಿರುವ ಪತ್ನಿಗೆ ಕ್ಷಣಕ್ಷಣಕ್ಕೂ ಕರೆಮಾಡಿ ರೋಝಾರ್ ಮಾತುಕತೆ ನಡೆಸುತ್ತಿದ್ದು, ಸೈರನ್ ಆದಂತೆ ಬಂಕರ್ ಕಡೆ ತೆರಳಿ ರಕ್ಷಣೆ ಪಡೆಯುತ್ತಿರುವುದಾಗಿ ಪತ್ನಿ ತಿಳಿಸಿದ್ದಾರಂತೆ. ಆಕೆಯ ಜತೆ ಮಾತನಾಡುವಾಗ ಯುದ್ಧ ವಿಮಾನಗಳು ಹಾರಾಡುವ ಶಬ್ದಗಳು ಕೇಳಿಬರುತ್ತಿದ್ದು, ಪತ್ನಿ ವಾಪಾಸ್ ಭಾರತಕ್ಕೆ ಬರುವವರೆಗೂ ನೆಮ್ಮದಿಯಿಲ್ಲ ಎಂದು ರೋಝಾರ್ ನೋವು ವ್ಯಕ್ತಪಡಿಸಿದ್ದಾರೆ.