ದಾಂಡೇಲಿ: ಪಡಿತರ ತಿದ್ದುಪಡಿ ಮತ್ತು ಹೆಸರು ಸೇರ್ಪಡೆಗೆ ಅ.8ರಿಂದ 10ರವರೆಗೆ ದಿನ ನಿಗದಿಪಡಿಸಲಾಗಿತ್ತು. ಅ.8ರಿಂದಲೇ ತಾಲೂಕಿನ ಗ್ರಾಮ ಒನ್ ಕೇಂದ್ರಗಳಿಗೆ ಹಾಗೂ ನಗರಸಭೆಯ ಆವರಣದಲ್ಲಿರುವ ಕರ್ನಾಟಕ ಒನ್ ಕೇಂದ್ರಕ್ಕೆ ಸಾರ್ವಜನಿಕರು ಪಡಿತರ ಚೀಟಿಯಲ್ಲಿ ತಿದ್ದುಪಡಿ ಹಾಗೂ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಬರುತ್ತಿದ್ದಾರೆ.
ಕಳೆದ ಮೂರು ದಿನಗಳಿಂದಲೂ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಕರ್ನಾಟಕ ಒನ್ ಕೇಂದ್ರ ಜನರಿಂದ ತುಂಬಿ ತುಳುಕುತ್ತಿದ್ದು, ಪಡಿತರ ತಿದ್ದುಪಡಿ ಹಾಗೂ ಹೆಸರು ಸೇರ್ಪಡೆಗೆ ನೂಕುನುಗ್ಗಲು ಉಂಟಾಗಿದೆ. ವಯಸ್ಸಾದವರು ಹಾಗೂ ಸಣ್ಣ ಸಣ್ಣ ಮಕ್ಕಳ ಜೊತೆ ಬಂದ ಮಹಿಳೆಯರು ಬೆಳಿಗ್ಗೆಯಿಂದ ಜಾತಕ ಪಕ್ಷಿಯಂತೆ ಕಾಯುವಂತಾಗಿದೆ. ಮಂಗಳವಾರ ಕೊನೆಯ ದಿನವಾಗಿದ್ದರಿಂದ ಒಂದು ಕಡೆ ಸರ್ವರ್ ಸಮಸ್ಯೆ ಇರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗತೊಡಗಿದೆ.
ಸರ್ವರ್ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಡಿತರ ತಿದ್ದುಪಡಿ ಮತ್ತು ಹೆಸರು ಸೇರ್ಪಡೆಯ ಅವಧಿಯನ್ನು ಅ.20ರವರೆಗೆ ವಿಸ್ತರಿಸಬೇಕೆಂಬ ಆಗ್ರಹ ಮತ್ತು ಮನವಿ ಸಾರ್ವಜನಿಕರಿಂದ ವ್ಯಕ್ತವಾಗಿದೆ.