ದಾಂಡೇಲಿ: ನಗರದ ಹಳೆ ದಾಂಡೇಲಿಯಲ್ಲಿ ಕಾಳಿ ನದಿಯಿಂದ ನೀರು ಕೊಂಡೊಯ್ಯುವ ಪೈಪ್ ಲೈನ್ ಕಾಮಗಾರಿಯನ್ನು ಹಳೆ ದಾಂಡೇಲಿಯ ಮುಖ್ಯ ರಸ್ತೆಯ ಬದಿಯಲ್ಲಿ ಮಾಡುವುದರ ಬದಲು ಹಳೆದಾಂಡೇಲಿಯ ಟಿಂಬರ್ ಡಿಪೋ ಪ್ರದೇಶದಲ್ಲಿ ಮಾಡುವಂತೆ ಹಳೆದಾಂಡೇಲಿ ಭಾಗದ ಸಾರ್ವಜನಿಕರು ನಗರದ ಪ್ರವಾಸಿ ಮಂದಿರದಲ್ಲಿ ನಗರಸಭೆಯ ಪೌರಾಯುಕ್ತರಿಗೆ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಿಗೆ ಮನವಿ ಮಾಡಿದರು.
ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಹಳೆ ದಾಂಡೇಲಿಯ ಹಿರಿಯರಾದ ವಿಷ್ಣು ಕಾಮತ್, ರಾಜು ಕೋಡ್ಕಣಿ, ಮಿಲೀಂದ್ ಕೋಡ್ಕಣಿ, ಅನ್ವರ್ ಪಠಾಣ್ ಸೇರಿದಂತೆ ಮೊದಲಾದವರು ಕಳೆದ ಎರಡು ಮೂರು ವರ್ಷಗಳಿಂದ ಹಳೆ ದಾಂಡೇಲಿ ಭಾಗದ ಜನರು ನಿರಂತರವಾಗಿ ವಿವಿಧ ಪೈಪ್ಲೈನ್ ಕಾಮಗಾರಿಗಳಿಂದ ಆಗಿರುವ ಸಮಸ್ಯೆಗಳಿಂದ ಬಸವಳಿದಿದ್ದಾರೆ. ಈಗಾಗಲೇ ರಸ್ತೆ ತೀವ್ರ ಹದಗೆಟ್ಟಿದ್ದು ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಹಳೆ ದಾಂಡೇಲಿಯ ಜನತೆ ಪ್ರತಿದಿನ ಧೂಳು ತಿನ್ನುವಂತಹ ದೌರ್ಭಾಗ್ಯದ ಸ್ಥಿತಿ ಎದುರಾಗಿದೆ.
ಹೀಗಿರುವಾಗ ಮತ್ತೊಂದು ಪೈಪ್‌ಲೈನ್ ಕಾಮಗಾರಿ ಆರಂಭವಾಗಿರುವುದು ಹಳೆ ದಾಂಡೇಲಿ ಭಾಗದ ಜನತೆಯ ಮನಸ್ಸನ್ನು ಮತ್ತಷ್ಟ್ಟು ತೀವ್ರ ಆಘಾತಗೊಳಿಸಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ಈಗ ನಡೆದಿರುವ ಪೈಪ್‌ಲೈನ್ ಕಾಮಗಾರಿಯನ್ನು ಹಳೆ ದಾಂಡೇಲಿಯ ಟಿಂಬರ್ ಡಿಪೋ ಪ್ರದೇಶದ ಮೂಲಕ ಹಾದು ಹೋಗಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅನಿಲ್ ನಾಯ್ಕರ್ ಮತ್ತು ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಆರ್ ವಿ ದೇಶಪಾಂಡೆ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಆರ್ ವಿ ದೇಶಪಾಂಡೆ ಅವರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನಗರಸಭೆಯ ಪೌರಾಯುಕ್ತರಿಗೆ ಸೂಚನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಹಳೆ ದಾಂಡೇಲಿ ಪ್ರದೇಶ ವ್ಯಾಪ್ತಿಯ ಸಾರ್ವಜನಿಕರು ಉಪಸ್ಥಿತರಿದ್ದರು.