ಶಿರಸಿ: ತಾಲೂಕಿನ ಕುಳವೆ ಗ್ರಾಮ ಪಂಚಾಯತದಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಹಾಗೂ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಗ್ರಾಮ ಸಭೆ ಸೋಮವಾರ ನಡೆಯಿತು.
ಗ್ರಾಪಂ ಸಭಾಭವನದಲ್ಲಿ ಪಂಚಾಯತ ಅಧ್ಯಕ್ಷೆ ರಂಜಿತಾ ಹೆಗಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನರೇಗಾ ಸಂಬಂಧಿಸಿದಂತೆ ಜನರ ಅಹವಾಲುಗಳನ್ನು ಸ್ವೀಕರಿಸಲಾಯಿತು. ನಂತರ ಮಾತನಾಡಿದ ರಂಜಿತಾ, ಅಸ್ಪೃಶ್ಯತೆ ನಿವಾರಣೆ, ಭ್ರಷ್ಟಾಚಾರ ನಿರ್ಮೂಲನೆ ಗಾಂಧಿಯವರ ಕನಸಾಗಿತ್ತು. ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಹೋರಾಡಿದ ಶ್ರೇಷ್ಠ ಪುರುಷರು. ಅದರಂತೆ ನಮ್ಮ ದೇಶದ ೨ ನೆಯ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ದೇಶವನ್ನು ಸಮರ್ಥವಾಗಿ ಮುನ್ನೆಡಿಸಿದ್ದರು. ದೇಶಕ್ಕೆ ಆಹಾರದ ಸಮಸ್ಯೆ ಎದುರಾದ ಸ್ವತಃ ಒಂದು ದಿನ ಆಹಾರ ತ್ಯಜಿಸಿ, ದೇಶದ ಆಹಾರ ಭದ್ರತೆಗೆ ಒತ್ತು ನೀಡಿದ್ದರು. ಅಂತಹ ಮಹಾನ್ ಪುರುಷರು ತತ್ವಾದರ್ಶನ ನಮಗೆಲ್ಲರಿಗೂ ಮಾದರಿ ಎಂದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರೆ ಯೋಜನೆಯು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ವೈಯಕ್ತಿಕ ಮತ್ತು ಸಾರ್ವಜನಿಕ ಕೆಲಸಕ್ಕೆ ಇದು ಸಹಕಾರಿಯಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಗ್ರಾಮದಲ್ಲಿ ಸಾಕಷ್ಟು ಕೆರೆಗಳು ಹೂಳು ತುಂಬಿದ್ದು, ಜಲಮೂಲಗಳನ್ನು ಸಂರಕ್ಷಿಸಬೇಕಿದೆ. ಕೆರೆ ಅಭಿವೃದ್ಧಿಗೆ ಗ್ರಾ.ಪಂ ಅನುದಾನದಲ್ಲಿ ಸಾಧ್ಯವಿಲ್ಲ. ನರೇಗಾ ಯೋಜನೆಯ ಮೂಲಕ ಸಾಧ್ಯ ಎಂದರು.
ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ಅ.೧ ಮತ್ತು ಅ.೨ ರಂದು ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಿದ್ದಾರೆ. ಸ್ವಚ್ಛತೆ ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ, ಸದಸ್ಯರಾದ ಸಂದೇಶ ಭಟ್ಟ ಬೆಳಖಂಡ, ಗಂಗಾಧರ ನಾಯ್ಕ, ಜ್ಯೋತಿ ನಾಯ್ಕ, ಜಾನಕಿ ಹಸ್ಲರ್, ಕಾರ್ಯದರ್ಶಿ ನಾಗರಾಜ ಜೋಗಿ, ಸಿಬ್ಬಂದಿಗಳಾದ ಶಾರದಾ ಹೆಗಡೆ, ರವಿ ಪಟಗಾರ ಇದ್ದರು.
ನಂತರ ಗ್ರಾಮ ಪಂಚಾಯತ ಸರ್ವ ಸದಸ್ಯರು, ಸಿಬ್ಬಂದಿಗಳು ಪಂಚಾಯತ ಆವರಣದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು.