ಶಿರಸಿ: ಪ್ರಪಂಚದ ಉಳಿದ ದೇಶಗಳಿಗಿಂತ ಭಾರತೀಯರು ನೆಮ್ಮದಿಯಾಗಿರಲು ಇಲ್ಲಿನ ಧರ್ಮಕ್ಕಂಟಿದ ಕುಟುಂಬ ವ್ಯವಸ್ಥೆಯೇ ಕಾರಣ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ‍್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು.
ಸೋಮವಾರ ಅವರು ನಗರದ ಮಾರಿಕಾಂಬಾ ದೇವಸ್ಥಾನದ ಸಹಕಾರದಲ್ಲಿ ಗ್ರಾಮಾಭ್ಯುದಯ ಸಂಸ್ಥೆ ಹಮ್ಮಿಕೊಂಡ ಸರ್ವ ದಂಪತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು. ಬೇರೆ ಬೇರೆ ದೇಶದವರು ನಮ್ಮ ದೇಶಕ್ಕೆ ಬಂದು ವಿವಿಧ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆಯ ಫಲಿತಾಂಶದಲ್ಲಿ ಭಾರತೀಯರ ನೆಮ್ಮದಿಗೆ ಕುಟುಂಬ ವ್ಯವಸ್ಥೆ ಕಾರಣ ಎಂದಿದ್ದಾರೆ. ಭಾರತೀಯ ಮಾದರಿಯ ಕುಟುಂಬ ವ್ಯವಸ್ಥೆ ಬೇರೆ ದೇಶಲ್ಲಿ ಸರಿಯಾಗಿ ಇಲ್ಲ, ಅನೇಕ ದೇಶದಲ್ಲಿ ಇಲ್ಲವೇ ಇಲ್ಲ. ಧರ್ಮಕ್ಕೆ ಆಧಾರ ಕುಟುಂಬ ವ್ಯವಸ್ಥೆ ಹಾಳಾಗಬಾರದು. ನಮ್ಮ ಕುಟುಂಬ ವ್ಯವಸ್ಥೆ ಹಾಳಾಗಬಾರದು ಎಂದರೆ ವಿವಾಹ ವಿಚ್ಛೇದನ ಆಗಬಾರದು ಎಂದು ಕರೆ ನೀಡಿದರು.
ಹಿಂದೂ ಸಮಾಜದ ಇಂದಿನ ಜ್ವಲಂತ ಸಮಸ್ಯೆ ವಿವಾಹ ವಿಚ್ಛೇದನ ಆಗಿದೆ. ಮದುವೆ ಆದ ದಂಪತಿಗಳು ಕೆಲವೇ ತಿಂಗಳಲ್ಲಿ ನ್ಯಾಯಾಲಯಕ್ಕೆ ವಿವಾಹ ವಿಚ್ಛೇದನಕ್ಕೆ ಓಡಾಡುತ್ತಿದ್ದಾರೆ. ಈ ವಿವಾಹ ವಿಚ್ಛೆದನದಿಂದ ಕುಟುಂಬ ವ್ಯವಸ್ಥೆ ಕುಸಿಯುತ್ತಿದೆ. ಧರ್ಮದ ಮುಖ್ಯ ಕೇಂದ್ರ ಕುಟುಂಬ ವ್ಯವಸ್ಥೆಯಾಗಿದೆ. ಇದೇ ಕುಸಿತಗೊಂಡರೆ ಧರ್ಮ ಅವನತಿಗೆ ಹೋಗುತ್ತದೆ ಎಂದು ಆತಂಕಿಸಿದ ಶ್ರೀಗಳು, ಅಗ್ನಿ ಸಾಕ್ಷಿಯಾಗಿ ವಿವಾಹ ನಡೆಯುತ್ತದೆ. ಅದನ್ನು ಬೇರೆ ಮಾಡಿಕೊಳ್ಳುವದು ವಿಚ್ಚೇದನ ಮಾಡುವದು ಧರ್ಮಕ್ಕೆ ವಿರುದ್ಧವಾದದ್ದು. ಪುರಾಣದಲ್ಲಿ ಎಲ್ಲೂ ವಿವಾಹ ವಿಚ್ಛೇದನದ ಉದಾಹರಣೆಗಳೇ ಇಲ್ಲ. ಈ ಪವಿತ್ರ ಸಂಬಂಧಕ್ಕೆ ದೈವಿಕ ಹಿನ್ನಲೆ ಇದೆ. ಇದನ್ನು ಕಡಿದುಕೊಂಡರೆ ಪರಿತಾಪವೇ ಜೀವನದಲ್ಲಿ ಉಳಿಯುತ್ತದೆ ಎಂದರು.
ದಂಪತಿಗಳಲ್ಲಿ ಭಿನ್ನಾಭಿಪ್ರಾಯ ತೀವ್ರ ಆಗದಂತೆ ನೋಡಿಕೊಂಡರೆ ಗಲಾಟೆಯೇ ಇರುವದಿಲ್ಲ. ಹೊಂದಿಕೊಂಡು ಹೋಗಬೇಕು. ಒಬ್ಬರು ಹಠ ಹೊತ್ತರೂ ಹೊಂದಿಕೆ ಆಗುವದಿಲ್ಲ. ಪರಸ್ಪರ ಹೊಂದಿ ನಡೆಯಬೇಕು. ಹೊಂದಿಕೊಳ್ಳಬೇಕು. ಸ್ವಲ್ಪ ಮಟ್ಟಿಗೆ ಸಡಿಲ ಮಾಡಿಕೊಳ್ಳಬೇಕು ಹಾಗೂ ಬಿರುಸಾದ ಮಾತುಗಳು ಬರಬಾರದು. ಮಾತು ಆಡುವಾಗ ನಿಗಾ ಇಟ್ಟು ಮಾತನಾಡಬೇಕು. ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಟ್ಟುಕೊಳ್ಳಬೇಕಿದೆ. ಆಗ ಬದುಕು ನೆಮ್ಮದಿಯಾಗುತ್ತದೆ. ಪರಸ್ಪರ ಆತ್ಮೀಯತೆ ಇಟ್ಟುಕೊಳ್ಳಬೇಕು ಎಂದೂ ಸಲಹೆ ಮಾಡಿದ ಶ್ರೀಗಳು, ಯಾವುದೇ ಕಾರಣಕ್ಕೂ ಭ್ರೂಣ ಹತ್ಯೆ ಮಾಡಬಾರದು. ಈಚೆಗಿನ ವರ್ಷದಲ್ಲಿ ಅನೇಕ ದಂಪತಿಗಳು ಬೆಳವಣಿಗೆಯ ಹಂತದಲ್ಲಿ ಇರುವ ಭ್ರೂಣ ತೆಗೆದರೆ ಕೊಲೆಗೆ ಸಮ. ಘೋರವಾದ ಕೊಲೆ. ಭ್ರೂಣ ಹತ್ಯೆ ಇನ್ನೂ ದೋಷ. ಪ್ರತ್ಯಕ್ಷ ಕೊಲೆಗಿಂತ ಹೆಚ್ಚು ಪಾಪ ಬರುತ್ತದೆ. ಭ್ರೂಣ ಹತ್ಯೆಗೆ ಸಮವಾದ ಪಾಪ ಇನ್ನೊಂದಿಲ್ಲ. ಹಾಗಾಗಿ ಅದನ್ನು ಮಾಡಬಾರದು. ಪ್ರತ್ಯಕ್ಷ ಹಾಗೂ ಪರೋಕ್ಷ ಭ್ರೂಣ ಹತ್ಯೆ ಮಾಡಬಾರದು. ಒಳ್ಳೆಯ ಸಂತತಿ ಕೊಡಲು ವಿವಾಹ ಆಗುವದು. ಹಿಂದೂ ಜನಸಂಖ್ಯೆ ಇಳಿಯುತ್ತಿದೆ. ಕನಿಷ್ಠ ಮೂವರಾದರೂ ಮಕ್ಕಳಾದರೂ ಇಟ್ಟುಕೊಳ್ಳಬೇಕು ಎಂದೂ ಹೇಳಿದರು.
ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ, ಧರ್ಮದರ್ಶಿಗಳಾದ ಸುಧೀರ್ ಹಂದ್ರಾಳ, ಶಿವಾನಂದ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಗೋಪಾಲ ಹೆಗಡೆ, ಗ್ರಾಮಾಭ್ಯುದಯದ ಅಧ್ಯಕ್ಷ ಎಂ.ಸಿ.ಹೆಗಡೆ, ಕಾರ್ಯದರ್ಶಿ ಸಂತೋಷ ಹೆಗಡೆ, ಎಂ.ಕೆ.ಗೋಳಿಕೊಪ್ಪ, ರಮೇಶ ಹೆಗಡೆ ದೊಡ್ನಳ್ಳಿ, ಸಿದ್ದು ಚೋರೆ, ಮಹೇಂದ್ರ ಹೆಗಡೆ, ಧೀರಜ್ ಹೆಗಡೆ ಇತರರು ಇದ್ದರು. ಮುಂಜಾನೆಯಿಂದ ವಿವಿಧ ವಿಷಯಗಳ ಮೇಲೆ ಉಪನ್ಯಾಸಗಳು ನಡೆದವು.