ಕಾರವಾರ: ಹಿರಿಯ ನಾಗರಿಕರಿಗೆ ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುವುದು ಮಕ್ಕಳು ಹಾಗೂ ಸಮಾಜದ ಜವಾಬ್ದಾರಿ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.
ಕಾಜುಬಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶ್ರೀ ಮಲ್ಲಿಕಾರ್ಜುನ ಜನಸೇವಾ ಸೊಸೈಟಿ ಬೆಳಗಾವಿ ಶಾಖೆ, ಯಲ್ಲಾಪುರ ಸ್ವಯಂ ಸೇವಾ ಸಂಸ್ಥೆ, ಇವರ ಸಂಯುಕ್ತ ಆಶ್ರಯದಲ್ಲಿ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಡೆದ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು ತಮ್ಮ ಇಡೀ ಜೀವನವನ್ನು ಸವೆಸಿರುತ್ತಾರೆ ವೃದ್ದಾಪ್ಯದಲ್ಲಿ ಅವರ ಆರೋಗ್ಯ ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ ಹಾಗೂ ಕರ್ತವ್ಯ ಕೂಡಾ ಆಗಿದೆ. ಹಿರಿಯ ನಾಗರಿಕರನ್ನು ಮಕ್ಕಳು ನಿರ್ಲಕ್ಷಿಸಿದರೆ ಅವರ ರಕ್ಷಣೆಗಾಗಿ ಕಾನೂನು ಇದೆ. ಹಿರಿಯ ನಾಗರಿಕರು ತಮ್ಮ ಸಮಸ್ಯೆಗಳಿಗಾಗಿ ಹಿರಿಯ ನಾಗರಿಕರ ಉಚಿತ ಸಹಾಯವಾಣಿ ಸಂಖ್ಯೆ ೧೦೯೦ ನ್ನು ಸಂಪರ್ಕಿಸಬಹುದಾಗಿದ್ದು, ಉಚಿತ ಕಾನೂನು ನೆರವು, ಆಪ್ತ ಸಮಾಲೋಚನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ರಿಯಾಯಿತಿಗಳು, ಪಿಂಚಣಿ ಸೌಲಭ್ಯ ಕೂಡಾ ದೊರೆಯಲಿದೆ ಎಂದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಹಿರಿಯ ನಾಗರಿಕರು ತಮ್ಮ ಸಮಸ್ಯೆಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೊಲೀಸ್ ಇಲಾಖೆಗೆ ದೂರು ನೀಡಬಹುದು. ಮಕ್ಕಳು ತಮ್ಮ ಪೋಷಕರನ್ನು ಅವರ ಸಂಧ್ಯಾ ಕಾಲದಲ್ಲಿ ಸುರಕ್ಷಿತವಾಗಿ ಮತ್ತು ಪ್ರೀತಿ ಗೌರವ ದಿಂದ ನೋಡಿಕೊಳ್ಳಬೇಕು. ಅವರನ್ನು ನಿರ್ಲಕ್ಷಿಸಿದಲ್ಲಿ ಅಂತಹವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಹೆಚ್.ಹೆಚ್.ಕುಕನೂರು, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣಾಧಿಕಾರಿ ಶಿಲ್ಪಾ ಎಮ್.ದೊಡ್ಡಮನಿ, ತಹಶೀಲ್ದಾರ್ ನಿಶ್ಚಲ್ ನರೋನಾ ನಿವೃತ್ತ ನೌಕರ ಸಂಘದ ಜಿಲ್ಲಾಧ್ಯಕ್ಷ ಎ.ಎಂ.ಹೆಗಡೆ ಇನ್ನಿತರರು ಇದ್ದರು.