ಸಿದ್ದಾಪುರ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನ ಖಂಡಿಸಿ ವಿವಿಧ ಸಂಘಟನೆಗಳು ಕರೆನೀಡಿದ್ದ ರಾಜ್ಯವ್ಯಾಪಿ ಬಂದ್‌ಗೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ದಿನನಿತ್ಯ ಜನರಿಂದ ಕೂಡಿರುತ್ತಿದ್ದ ಪಟ್ಟಣ ಸ್ತಬ್ಧವಾಗಿತ್ತು. ವರ್ತಕರು ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿ ಬಂದ್‌ಗೆ ಸಹಕಾರ ನೀಡಿದ್ದರು. ಬೆಳಗಿನ ವೇಳೆ ದ್ವಿಚಕ್ರ ವಾಹನಗಳು ಹಾಗೂ ಕೆಲ ಖಾಸಗಿ ವಾಹನಗಳು ಸಂಚರಿಸಿದ್ದು ಬಿಟ್ಟರೆ ಉಳಿದಂತೆ ವಾಹನಗಳ ಸಂಚಾರ ವಿರಳವಾಗಿತ್ತು.
ನಾಡ ದೇವಿ ಹೋರಾಟ ವೇದಿಕೆಯ ನೇತೃತ್ವದಲ್ಲಿ ಗಂಗಾಂಬಿಕ ದೇವಾಲಯದ ಎದುರಿನಿಂದ ಪ್ರತಿಭಟನಾ ರ‍್ಯಾಲಿ ನಡೆಸಿ, ತಿಮ್ಮಪ್ಪ ನಾಯಕ ಸರ್ಕಲ್, ಹೊಸ ಬಸ್ ನಿಲ್ದಾಣ, ರಾಜಮಾರ್ಗ, ಬಿ.ಎಸ್.ಸರ್ಕಲ್ ಮೂಲಕ ಸಾಗಿ ತಹಶೀಲ್ದಾರ್ ಕಚೇರಿಗೆ ತಲುಪಿತು. ಅಲ್ಲಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ, ಪ್ರಧಾನಮಂತ್ರಿಗೆ ಮನವಿ ರವಾನಿಸಲಾಯಿತು.