ಕಾರವಾರ: ಸರಕಾರಿ ಸೇವೆಯಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅತಿಯಾದ ಬಲವಂತಯುತ ಒತ್ತಡದ ಬದಲಿಗೆ ಆರೋಗ್ಯಕರ ಒತ್ತಡವಿದ್ದಾಗ ಮಾತ್ರ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಖಂಡೂ ಹೇಳಿದರು.
ನಗರದ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಕಾರವಾರ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ಶುಕ್ರವಾರ ಆಯೋಜಿಸಲಾದ ಜಿಲ್ಲೆಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಒತ್ತಡ ನಿವಾರಣೆ, ಆರೋಗ್ಯ ಮತ್ತು ಕ್ಷೇಮದ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒತ್ತಡವಿಲ್ಲದೇ ಜೀವನ ಸಂಪೂರ್ಣ ಎನಿಸಿಕೊಳ್ಳುವುದಿಲ್ಲ. ಆದರೆ ಅತಿಯಾದ ಒತ್ತಡ ಆರೋಗ್ಯದ ನಿಯಂತ್ರಣ ಕಳೆದುಕೊಳ್ಳುತ್ತದೆ. ದಿನನಿತ್ಯದ ಕೆಲಸದ ಒತ್ತಡ ನಿವಾರಣೆ ಹಾಗೂ ಆರೋಗ್ಯದ ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಸಲಹೆ-ಸೂಚನೆಗಳಿವೆ. ಅಂತಹ ಪ್ರಮುಖ ಪರಿಹಾರ ಅಂಶಗಳ ಕುರಿತು ಅರಿವು ಮೂಡಿಸಲು ಈ ಕಾರ್ಯಗಾರ ಹಮ್ಮಿಕೊಂಡಿದ್ದು, ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಗಾರದಲ್ಲಿ ಪ್ರತಿಯೊಬ್ಬ ಅಧಿಕಾರಿಗಳು, ಸಿಬ್ಬಂದಿ ಸಂಪನ್ಮೂಲ ವ್ಯಕ್ತಿಗಳೊಂದಿಗೆ ತಮ್ಮ ದೈನಂದಿನ ಜೀವನದ ಒತ್ತಡದ ಸಮಸ್ಯೆಗಳನ್ನ ಮುಕ್ತವಾಗಿ ಹಂಚಿಕೊಂಡು ಸೂಕ್ತ ಸಲಹೆ ಪಡೆಯುವುದು ಉತ್ತಮ. ಜೊತೆಗೆ ಸ್ಥಳೀಯ ಸೇವೆಯಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಂತೆ ಆರೋಗ್ಯದ ಕಾಳಜಿ ವಹಿಸುವ ಮೂಲಕ ಒತ್ತಡದಿಂದ ಮುಕ್ತರಾಗಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಕ್ರಿಮ್ಸ್ ಡೀನ್ ಡಾ.ಗಜಾನನ ನಾಯಕ್ ಮಾತನಾಡಿ, ವೈಯಕ್ತಿಕ ಜೀವನಕ್ಕೂ ಹಾಗೂ ವೃತ್ತಿ ಜೀವನವನ್ನು ವಿಭಿನ್ನವಾಗಿ ಅನುಭವಿಸುವ ಮೂಲಕ ನಿಮ್ಮ ಒತ್ತಡದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪ್ರತಿಯೊಬ್ಬರೂ ತಮ್ಮನ್ನು ತಾವು ಪ್ರೀತಿಸುವ ಮೂಲಕ ಒತ್ತಡವನ್ನು ದೂರ ಇಡಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ನಂತರ ಆಯುಷ ಇಲಾಖೆಯ ಯೋಗ ತರಬೇತುದಾರರಾದ ಗಣಪತಿ ಹೆಗಡೆ ಅವರು ಮಾನಸಿಕ ಆರೋಗ್ಯಕ್ಕಾಗಿ ಯೋಗಾಸನ, ಕ್ರಿಮ್ಸ್ನ ಜನರಲ್ ಫಿಜಿಶಿಯನ್ ಡಾ. ಅಮಿತ್ ಕಾಮಥ ಅವರು ಒತ್ತಡ ನಿರ್ವಹಣೆ ಮತ್ತು ಹೃದಯ ಸಂಬಂಧಿ ಕಾಯಿಲೆ, ಜಿಮ್ ತರಬೇತುದಾರ ದೀಪಕ ಅವರು ದಿನನಿತ್ಯ ಸಾಮಾನ್ಯ ವ್ಯಾಯಾಮ ತರಬೇತಿ, ಶಿರಸಿಯ ಸರಕಾರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ ಅವರು ಆಯುರ್ವೇದದಲ್ಲಿ ಒತ್ತಡದ ನಿವಾರಣೆ, ಕ್ರಿಮ್ಸ್ನ ಮಾನೊರೋಗ ತಜ್ಞರಾದ ಡಾ.ವಿಜಯ್‌ರಾಜ್, ಡಾ.ಅಕ್ಷಯ್ ಪಾಠಕ್, ಧ್ಯಾನ ಮತ್ತು ಆರೋಗ್ಯ ಮುಂಡಗೋಡದ ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂಜೀವ್ ಗಲಗಲಿ ಅವರು ಧ್ಯಾನ ಮತ್ತು ಆರೋಗ್ಯ ವಿಷಯ ಕುರಿತು ತಿಳಿಸಿಕೊಟ್ಟರು.
ಶಿರಸಿ ತಾಲ್ಲೂಕಿನ ಮತ್ತಿಘಟ್ಟದ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಡಾ.ಪ್ರಸನ್ನ ಎಸ್. ನಿರೂಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿಗಳಾದ ನಾಗೇಶ ರಾಯ್ಕರ, ಡಿ.ಎಂ.ಜಕ್ಕಪ್ಪಗೋಳ, ಮುಖ್ಯ ಲೆಕ್ಕಾಧಿಕಾರಿ ಸತೀಶ ಪವಾರ, ಮುಖ್ಯ ಯೋಜನಾಧಿಕಾರಿ ವಿನೋದ್ ಅಣ್ವೇಕರ್, ಯೋಜನಾ ನಿರ್ದೇಶಕ (ಡಿಆರ್‌ಡಿಎ) ಕರೀಂ ಅಸಾದಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಯು.ಎಚ್., ಲೆಕ್ಕಾಧಿಕಾರಿ ಆನಂದಸಾ ಹಬೀಬ, ಕ್ರಿಮ್ಸ್ನ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಕುಡ್ತಲಕರ್, ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ. ಶಂಕರ ರಾವ್, ಸೇರಿದಂತೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.