ಸಿದ್ದಾಪುರ: ತಾಲೂಕಿನ ಶ್ರೀಮಾನ್ ನೆಲೆಮಾವು ಮಠದಲ್ಲಿ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಸಸ್ಯ ಮಂತ್ರಾಕ್ಷತೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಶ್ರೀಗಳು ತಮ್ಮ ಅಮೃತ ಹಸ್ತದಿಂದ ಶಿಷ್ಯ ವೃಂದದವರಿಗೆ ಜಾಯಿಕಾಯಿ,ಲವಂಗದ ಸಸಿಗಳನ್ನು ಮಂತ್ರಾಕ್ಷತೆಯಾಗಿ ನೀಡಿದರು.
ಕೃಷಿಗೆ ಅತ್ಯಂತ ಪ್ರಾಮುಖ್ಯತೆ ನೀಡುವ ಶ್ರೀಮಾನ್ ನೆಲೆಮಾವು ಮಠದ ಕೃಷಿ ಜಮೀನಿನಲ್ಲಿ ಶ್ರೀ ಮಾಧವಾನಂದ ಭಾರತಿ ಶ್ರೀಗಳು ಲವಂಗದ ಸಸಿಯನ್ನು ನೆಡುವ ಮೂಲಕ ದಾಲ್ಚಿನ್ನಿ, ಜಾಯಿಕಾಯಿ, ಲವಂಗ ಮುಂತಾದ ಸಂಬಾರು ಪದಾರ್ಥದ ಗಿಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಗೆ ಪರ್ಯಾಯ ಉಪ ಬೆಳೆಯಾಗಿ ಬೆಳೆಯಬೇಕೆಂಬ ಸಂದೇಶ ನೀಡಿದರು. ಉತ್ತರ ಕನ್ನಡ ಸಾವಯವ ಒಕ್ಕೂಟ ಸಂಸ್ಥೆಯ ಮುಖಾಂತರ ಶ್ರೀ ಮಠದ ಕೃಷಿ ಜಮೀನಿನಲ್ಲಿ ಹಾಗೂ ಒಕ್ಕೂಟದ ಸದಸ್ಯ ಸಂಘವಾದ ಶ್ರೀ ಮಹಾಗಣಪತಿ ಸಾವಯವ ಸಮಿತಿ ಕಿಬ್ಬಳ್ಳಿಯ ವ್ಯಾಪ್ತಿಯಲ್ಲಿ ಸಂಬಾರು ಪದಾರ್ಥದ ಗಿಡಗಳನ್ನು ನೆಡುವ ಸಂಕಲ್ಪ ಮಾಡಲಾಯಿತು.
ಉತ್ತರ ಕನ್ನಡ ಸಾವಯವ ಒಕ್ಕೂಟದ ವತಿಯಿಂದ ದಾಲ್ಚಿನ್ನಿ, ಲವಂಗ, ಜಾಯಿಕಾಯಿ ಸಸಿಗಳನ್ನು ವಿತರಿಸಲಾಯಿತು.
ಉತ್ತರ ಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷರಾದ ವಿಶ್ವೇಶ್ವರ ಭಟ್, ನಿರ್ದೇಶಕರಾದ ರಾಘವ ಹೆಗಡೆ ಕೊರ್ಸೆ, ರಾಮಚಂದ್ರ ಭಟ್ ಕಿಬ್ಬಳ್ಳಿ, ಮುಖ್ಯ ಕಾರ್ಯನಿರ್ವಾಹಕರಾದ ವಿಕಾಸ ಹೆಗಡೆ, ಅಜಯ್ ಭಟ್, ಶ್ರೀ ಮಠದ ಅಧ್ಯಕ್ಷರಾದ ಜಿ. ಎಮ್. ಹೆಗಡೆ ಹೆಗ್ಗನೂರ್, ನಾಗಪತಿ ಹೆಗಡೆ ಹರ್ತೆಬೈಲ್ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.