ಶಿರಸಿ: ಭಜನೆಯಿಂದ ಮನಸ್ಸಿನ ದೋಷ ಹೋಗುತ್ತವೆ. ವಿನಾಕಾರಣ ಕಾಣಿಸಿಕೊಳ್ಳುವ ರೋಗಗಳಿದ್ದರೂ ಅದರ ಬೀಜವೇ ನಾಶವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಹೇಳಿದರು.
ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಿತ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಗುರು ಸೇವೆ ಸಲ್ಲಿಸಿದ ಮರಾಠೀ ಸಮಾಜದ ಶಿಷ್ಯರನ್ನು ಉದ್ದೇಶಿಸಿ ಆಶೀರ್ವಚನ ನುಡಿದರು.
ಭಜನೆ ಮಾಡಿದರೆ ಅದೃಷ್ಟ ಹಾಗೂ ದೃಷ್ಟ ಎರಡೂ ಪ್ರಯೋಜನ ಇದೆ. ಭಜನೆ ಮಾಡುವ ವ್ಯಕ್ತಿಗೆ ಒಳ್ಳೆಯ ಆರೋಗ್ಯ ಪಡೆಯಲು ಕಾರಣವಾಗುತ್ತದೆ. ಮನಸ್ಸಿಗೆ ನೆಮ್ಮದಿ, ಆನಂದ ಉಂಟಾಗುತ್ತದೆ. ದೇವರ ನಾಮದಿಂದ ಆಗುವ ಸಂತೋಷ ಬೇರೇನೆ. ಆನಂದದ ನೆಮ್ಮದಿಗಾಗಿ ಭಜನೆ ಮಾಡಬೇಕು. ಸಾಂಸಾರಿಕ ಚಿಂತನೆ ಇದ್ದರೂ ಅದೂ ಕೂಡ ದೂರವಾಗುತ್ತದೆ ಎಂದು ಶ್ರೀಗಳು ಹೇಳಿದರು.
ವಾತಾವರಣ ಹಾಗೂ ತಿನ್ನುವ ಆಹಾರದಿಂದ ಕೆಲ ರೋಗಗಳು ಬರುತ್ತವೆ. ಆದರೆ, ಕೆಲವು ರೋಗಗಳಿಗೆ ವೈದ್ಯರಿಗೂ ಕಾರಣ ಹುಡುಕಲು ಆಗದು. ಅದು ಕಳೆದ ಜನ್ಮದ ಪಾಪದ ಫಲವಾಗಿರುತ್ತದೆ. ನಮ್ಮಲ್ಲಿ ಪಾಪಗಳ ಬೀಜಗಳು ಸೂಕ್ಷ್ಮವಾಗಿ ಇರುತ್ತವೆ. ನಿಯಮಿತವಾಗಿ ಭಜನೆ ಮಾಡುತ್ತಿದ್ದರೆ ನಮ್ಮೊಳಗಿನ ಸೂಕ್ಷ್ಮ ಬೀಜ ನಾಶ ಆಗುತ್ತವೆ ಎಂದರು. ತೀರ್ಥ ಕ್ಷೇತ್ರಗಳಿಗೆ, ಮಠಗಳಿಗೆ ವರ್ಷಕ್ಕೊಮ್ಮೆ ಆದರೂ ಹೋಗಬೇಕು. ಇಂಥ ಕ್ಷೇತ್ರಗಳಿಗೆ ತೆರಳಿದಾಗ ನಮ್ಮ ನಮ್ಮ ಮನಸ್ಸಿನಲ್ಲಿ ಶ್ರದ್ಧಾ ಭಾವನೆ ಬರುತ್ತದೆ. ಇಂಥ ಪವಿತ್ರ ಕ್ಷೇತ್ರದಲ್ಲಿ ನಾವೂ ಶ್ರದ್ಧಾ ಭಾವದಿಂದ ಇದ್ದರೆ ಪ್ರಧಾನವಾಗಿ ಮೂರು ಪ್ರಯೋಜನ ಆಗುತ್ತದೆ. ಯಾವತ್ತೂ ತೀರ್ಥ ಕ್ಷೇತ್ರ, ಮಠಗಳಿಗೆ ಶಕ್ತಿ ಇರುತ್ತವೆ. ಮಠಗಳಲ್ಲಿ ತಪಸ್ವಿಗಳು ತಪಸ್ಸು ಮಾಡುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳು ಯಜ್ಞಗಳು ಆಗಾಗ ನಡೆಯುತ್ತಿರುತ್ತವೆ. ಆ ಪ್ರಭಾವ ನಮ್ಮ ಮೇಲೆ ಪರಿಣಾಮ ಬೀರುತ್ತವೆ ಎಂದು ಶ್ರೀಗಳು ತಿಳಿಸಿದರು.
ಕಾಶಿಗೆ ಜೀವನದಲ್ಲಿ ಒಂದು ಸಲ ಆದರೂ ಹೋಗಿ ಗಂಗಾ ಸ್ನಾನ ಮಾಡಬೇಕು. ಅದರಿಂದ ಆತ್ಮೋನ್ನತಿ ಆಗುತ್ತದೆ. ಎಷ್ಟೋ ಪಾಪಗಳು ಕರಗುತ್ತವೆ. ದೊಡ್ಡ ಕ್ಷೇತ್ರಗಳಿಗೆ ಜೀವನದಲ್ಲಿ ಒಮ್ಮೆ ಮಾತ್ರ ಹೋಗಲು ಸಾಧ್ಯ ಆಗಬಹುದು. ಮಠಕ್ಕೆ ಹಾಗಲ್ಲ, ವರ್ಷಕ್ಕೊಮ್ಮೆ ಆದರೂ ಬರಬಹುದು ಎಂದೂ ಹೇಳಿದರು.
ಸಮಾಜದ ಪ್ರಮುಖ ಸೋಮು ಮರಾಠಿ, ಎಲ್ಲ ಊರಿನಿಂದಲೂ ಮಠಕ್ಕೆ, ಚಾತುರ್ಮಾಸ್ಯದ ಅವಧಿಯಲ್ಲಿ ಬರಬೇಕು. ಸಮಸ್ಯೆಗಳಿದ್ದರೂ ಮಾತನಾಡಿ ಸರಿ ಮಾಡಿಕೊಳ್ಳಬೇಕು ಎಂದರು. ನಾರಾಯಣ ಮರಾಠಿ, ಸಂತೋಷ ಮರಾಠಿ ಯಲ್ಲಾಪುರ, ಮಂಜುನಾಥ ಮರಾಠಿ ಮಂಜುಗುಣಿ, ಗೋಪಾಲ ಮರಾಠಿ ಮಾನಿಮನೆ, ಯಶವಂತ ಪಾಟೀಲ ತಾಟವಾಳ, ಉದಯ ಮರಾಠಿ ದೇವನಳ್ಳಿ, ಶಿರಸಿ, ಹೊನ್ನಾವರ, ಯಲ್ಲಾಪುರ, ಕುಮಟಾ ಸೇರಿದಂತೆ ವಿವಿಧಡೆಯ ಮರಾಠಿ ಸಮಾಜದ ಶಿಷ್ಯರು ಆಗಮಿಸಿದ್ದರು.
ಮಠದಲ್ಲಿನ ತೀರ್ಥ ಪ್ರಸಾದ ವಿಶೇಷತೆ ಏನು?
ಮಠದಲ್ಲಿ ತೀರ್ಥ ಕೊಡುವ ಪದ್ಧತಿಗೆ ಸಮಯ ಬಯಸಿದರೂ ಇಟ್ಟುಕೊಂಡಿದ್ದೇವೆ. ಏಕೆಂದರೆ, ಅದಕ್ಕೆ ಅದರದ್ದೇ ಆದ ಮಹತ್ವ ಇದೆ. ಭಗವಂತನ ಅಭಿಷೇಕದ ಜಲವೇ ತೀರ್ಥ. ಪೂಜಿಸುವ ಸಾಲಿಗ್ರಾಮಕ್ಕೆ ತುಳಸಿ, ಗಂಧ ಸಮರ್ಪಿಸಿ ಪವಿತ್ರೀಕರಿಸುವ ಶಂಖದಿಂದ ಅಭಿಷೇಕ ಮಾಡಿದಾಗ ಅದು ತೀರ್ಥವಾಗುತ್ತದೆ. ಈ ವೇಳೆ ಘಂಟಾ ನಾದ, ಪುರುಷ ಸೂಕ್ತ ಪಠಣ ಕೂಡ ಇರುತ್ತವೆ. ಅಭಿಷೇಕ ಮಾಡುವ ತೀರ್ಥ ತಾಮ್ರದ ಪಾತ್ರದಲ್ಲಿಯೂ ಇರುತ್ತದೆ. ಹಾಗೂ ಚಂದ್ರಮೌಳೇಶ್ವರ, ಶ್ರೀಚಕ್ರದ, ಅಮ್ಮನವರ ಅಭಿಷೇಕದ ಜಲ ಕೂಡ ಈ ತೀರ್ಥದಲ್ಲಿ ಇರುತ್ತದೆ. ಶ್ರದ್ಧೆಯಿಂದ ತೀರ್ಥ ತೆಗೆದುಕೊಂಡರೆ ನಮ್ಮೊಳಗೆ ಇರುವ ಅನೇಕ ಪಾಪ ಕಳೆದು ಬದುಕು ಪಾವನ ಆಗುತ್ತದೆ.
-ಸ್ವರ್ಣವಲ್ಲೀ ಶ್ರೀ