ದಾಂಡೇಲಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಡಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ದಾಂಡೇಲಿ ಪೊಲೀಸ್ ಉಪವಿಭಾಗದ ಸಿಬ್ಬಂದಿಗಳಿಗೆ ಮಾನಸಿಕ ಒತ್ತಡ ನಿವಾರಣೆಯ ಕುರಿತು ನಗರದ ಡಿಲಕ್ಸ್ ಸಭಾಭವನದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಡಿವೈಎಸ್ಪಿ ಶಿವಾನಂದ ಕಟಗಿ ಉದ್ಘಾಟಿಸಿ ಮಾತನಾಡಿ, ವಿಶೇಷವಾಗಿ ಪೊಲೀಸ್ ಇಲಾಖೆಯಲ್ಲಿ ಒತ್ತಡದ ನಡುವೆ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಆದಾಗ್ಯೂ ಒತ್ತಡವನ್ನು ಮೆಟ್ಟಿನಿಂತು ಕೆಲಸ ಮಾಡಬೇಕಾದರೇ, ಒತ್ತಡವನ್ನು ನಿವಾರಿಸಿಕೊಳ್ಳುವುದು ಹೇಗೆ ಎನ್ನುವುದರ ಅರಿವು ನಮಗಿರಬೇಕು. ಒತ್ತಡದಿಂದ ಆರೋಗ್ಯವು ಹದಗೆಡುತ್ತದೆ. ಸದೃಢ ಆರೋಗ್ಯವೆ ಎಲ್ಲದಕ್ಕೂ ಮೂಲ. ಈ ನಿಟ್ಟಿನಲ್ಲಿ ನಾವು ನಮ್ಮ ಆರೋಗ್ಯ ರಕ್ಷಣೆಗೂ ಹೆಚ್ಚಿನ ಆಧ್ಯತೆಯನ್ನು ನೀಡಬೇಕು. ಯೋಗಾಬ್ಯಾಸ, ವ್ಯಾಯಾಮಗಳಂತ ಚಟುವಟಿಕೆಗಳನ್ನು ನಿತ್ಯ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರವಾರದ ಜಿಲ್ಲಾ ಆಸ್ಪತ್ರೆಯ ಡಾ.ಅಕ್ಷಯ್ ಪಾಟೀಲ್ ಮಾತನಾಡಿ, ಸಮಸ್ಯೆಗಳಿಂದ ಒತ್ತಡಕ್ಕೊಳಗಾಗಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ಕೇಳುವ ಪೊಲೀಸರು ಮೊದಲು ಮಾನಸಿಕವಾಗಿ ಸದೃಢರಾಗಿರಬೇಕು. ಈ ನಿಟ್ಟಿನಲ್ಲಿ ಮಾನಸಿಕ ಒತ್ತಡಕ್ಕೊಳಗಾಗದೇ ಕರ್ತವ್ಯನಿರ್ವಹಣೆ ಮಾಡಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ದಾಂಡೇಲಿ ಸಿಪಿಐ ಭೀಮಣ್ಣ.ಎಂ.ಸೂರಿ, ಹಳಿಯಾಳದ ಸಿಪಿಐ ಸುರೇಶ್ ಶಿಂಗೆ ಮೊದಲಾದವರು ಉಪಸ್ಥಿತರಿದ್ದರು.