ಗೋಕರ್ಣ: ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಕಡ್ಲೆ, ಕರ್ಕಿ ಮತ್ತು ಹೊಸಾಕುಳಿ ವಲಯಗಳ ಶಿಷ್ಯರಿಂದ ಗುರುಭಿಕ್ಷಾಸೇವೆ ಸ್ವೀಕರಿಸಿದರು.
ಈ ವೇಳೆ ಆಶೀರ್ವಚನ ನೀಡಿ, ಪ್ರೀತಿಯ ಮೂಲಕ ಸಮಾಜವನ್ನು ಗೆಲ್ಲುವುದು ರಾಮನ ದಾರಿ; ಇದಕ್ಕೆ ವಿರುದ್ಧವಾಗಿ ಭೀತಿ ಹುಟ್ಟಿಸುವ ಮೂಲಕ ಗೆಲ್ಲುವ ಪ್ರಯತ್ನ ರಾವಣನದ್ದು. ಮೊದಲ ದಾರಿಯನ್ನು ಆರಿಸಿಕೊಂಡು ಸೇವೆ- ಪ್ರೀತಿಯ ಮೂಲಕ ಸಮಾಜದ ವಿಶ್ವಾಸ ಗಳಿಸೋಣ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ, ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಭಟ್ ಹೊಸಾಕುಳಿ, ಹೊಸಾಕುಳಿ ವಲಯದ ಅಧ್ಯಕ್ಷ ಗೋವಿಂದ ಹೆಗಡೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 15 ಸಾಧಕರನ್ನು ಸನ್ಮಾನಿಸಲಾಯಿತು. ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.