ಕಾರವಾರ: ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಯೋಜನೆಯ ವಿರುದ್ಧ ಸಲ್ಲಿಕೆಯಾಗಿದ್ದ ವೃಕ್ಷ ಫೌಂಡೇಶನ್ನ ಪಿಐಎಲ್ ಅನ್ನು ವಿಲೇವಾರಿ ಮಾಡಿದೆ ಎಂದು ರೈಲ್ವೆ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಗಾಂವ್ಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಶಂಕುಸ್ಥಾಪನೆ ಮಾಡಲಾದ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಹುಬ್ಬಳ್ಳಿಯ ಕಲಘಟಕಿಯವರೆಗೆ ಹಳಿ ನಿರ್ಮಿಸಲಾಗಿದೆ. ತದನಂತರ ಪರಿಸರವಾದಿಗಳು ಒಂದಲ್ಲಾ ಒಂದು ರೀತಿಯಲ್ಲಿ ಅಡ್ಡಗಾಲು ಹಾಕುತ್ತಿದ್ದರು. ಮೊದಲಿಗೆ ನಮ್ಮ ಜಿಲ್ಲೆಯ ಪಾಂಡುರoಗ ಹೆಗಡೆಯವರು ಈ ಯೋಜನೆ ವಿರುದ್ಧ ಪರಿಸರ ಕಾರಣವೊಡ್ಡಿ 2001ರಲ್ಲಿ ಪಿಐಎಲ್ ಸಲ್ಲಿಸಿದ್ದರು. ಇದರಿಂದಾಗಿ 19 ವರ್ಷಗಳ ಕಾಲ ಯೋಜನೆ ನೆನೆಗುದಿಗೆ ಬಿದ್ದಿತ್ತು. ತದನಂತರ 2020ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ರಾಜ್ಯ ವನ್ಯಜೀವಿ ಮಂಡಳಿಯಿoದ ಯೋಜನೆಗೆ ಕ್ಲಿಯರೆನ್ಸ್ ಸಿಗುತ್ತಿದ್ದಂತೆ ಬೆಂಗಳೂರಿನ ವೃಕ್ಷಫೌಂಡೇಶನ್ ಈ ಆದೇಶದ ವಿರುದ್ಧ ಕೋರ್ಟ್ಗೆ ಹೋಗಿ, ಕುಂಟು ನೆಪಗಳನ್ನು ತಂದು ತಡೆಯಾಜ್ಞೆ ತಂದಿದ್ದರಿoದ ಯೋಜನೆ ಮತ್ತಷ್ಟು ವಿಳಂಬವಾಗುವಂತಾಯಿತು ಎಂದರು.
2021ರಲ್ಲಿ ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯ ಮೂಲಕ ತಡೆಯಾಜ್ಞೆ ತೆರವುಗೊಳಿಸಲು ವಕೀಲರಾದ ಆರ್.ಜಿ.ಕೊಲ್ಲೆ, ಅಕ್ಷಯ್ ಕೊಲ್ಲೆಯವರು ವಾದ ಮಂಡಿಸಿದಾಗ ಹೈಕೋರ್ಟ್ ವನ್ಯಜೀವಿ ಮಂಡಳಿಯಿoದ ವರದಿ ನೀಡಲು ಸೂಚಿಸಿತ್ತು. ಅದರಂತೆ ವನ್ಯಜೀವಿ ಮಂಡಳಿ ಅಧ್ಯಯನ ನಡೆಸಿ ರೈಲ್ವೆ ಯೋಜನೆಯ ಪರವಾಗಿ ವರದಿ ನೀಡಿದ್ದು, ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ಉತ್ತಮ ಆದೇಶ ನೀಡುವ ಮೂಲಕ ಇಷ್ಟು ವರ್ಷಗಳ ಕಾನೂನು ಪ್ರಕ್ರಿಯೆಗೆ ಇತಿಶ್ರೀ ಹಾಡಿದ್ದಾರೆ. ಅಲ್ಲದೇ ರೈಲ್ವೆ ಮಂಡಳಿ ಕೂಡ ವನ್ಯಜೀವಿ ಮಂಡಳಿಯ ನಿರ್ದೇಶನದಂತೆ ಮಾಡುವುದಾಗಿ ಅಫಿಡವಿಟ್ ನೀಡಿರುವುದರಿಂದ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ ಇದ್ದ ಎಲ್ಲಾ ತೊಡಕು ನಿವಾರಣೆಯಾದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರೈಲ್ವೆ ಸೇವಾ ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಪ್ರಮುಖರಾದ ಮಹೇಶ್ ಗೋಳಿಕಟ್ಟಿ, ವೆಂಟು ಮಾಸ್ತರ ಶೀಳ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.