ಕಾರವಾರ: ಹಿಂದೂ ಧರ್ಮ- ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಎಲಿಷಾ ಯಲಕಪಾಟಿಯನ್ನು ಗಡಿಪಾರು ಮಾಡಬೇಕೆಂದು ಹಿಂದೂಪರ ಹೋರಾಟಗಾರ ಅರುಣಕುಮಾರ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲಿಷಾ ಯಲಕಪಾಟಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೃಹತ್ ಪ್ರತಿಭಟನೆ ನಡೆಸಿದ್ದೆವು. ನಮ್ಮ ಹೋರಾಟ ಯಶಸ್ವಿಯಾಗಿದ್ದು, ಪೊಲೀಸರು ಸಂಜೆಯೇ ಆತನನ್ನು ಬಂಧಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕ ಸತೀಶ್ ಸೈಲ್ ಅವರ ಗಮನಕ್ಕೆ ತಂದಾಗ ಅವರು ಕೂಡ ನಮಗೆ ಸ್ಪಂದಿಸಿ, ಎಸ್‌ಪಿಯವರೊಂದಿಗೆ ಮಾತನಾಡಿ ಎಲಿಷಾನ ಬಂಧನಕ್ಕೆ ಆಗ್ರಹಿಸಿದ್ದರು. ಹಿಂದೂ ಸಮಾಜದ ಪರವಾಗಿ ನಾನಿದ್ದೇನೆ ಎಂದಿದ್ದರು ಎಂದರು.
ಎಲಿಷಾನ ವಿರುದ್ಧ ದೂರು ನೀಡಿದ್ದ ಮಾರುತಿ ನಾಯ್ಕ ಮಾತನಾಡಿ, ಎಲಿಷಾ ನನ್ನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದ. ಹಣ ನೀಡುವುದಾಗಿ ಆಮಿಷವೊಡ್ಡುತ್ತಿದ್ದ. ಪ್ರತಿಬಾರಿಯೂ ಹಿಂದೂ ಧರ್ಮಗಳ ಬಗ್ಗೆ ಅವಹೇಳನ ಮಾಡುತ್ತಿದ್ದ. ಹೀಗಾಗಿ ಯಾವುದೇ ವೈಯಕ್ತಿಕ ಲಾಭಕ್ಕಲ್ಲದೆ, ಆತನ ಮನಸ್ಥಿತಿಯನ್ನು ಬಹಿರಂಗಪಡಿಸಬೇಕೆ0ದು ಆತ ಮಾತನಾಡುತ್ತಿದ್ದಾಗ ವಿಡಿಯೋ ಮಾಡಿ, ಅದನ್ನು ಪೊಲೀಸ್ ಠಾಣೆಗೆ ಸಾಕ್ಷಿಯಾಗಿ ನೀಡಿದ್ದೇನೆ. ಆದರೆ ಮಾಜಿ ಶಾಸಕಿ ರೂಪಾಲಿ ನಾಯ್ಕರವರು ನನ್ನ ವಿರುದ್ಧವೇ ತನಿಖೆ ಮಾಡಬೇಕೆಂದು ಪತ್ರಿಕಾ ಹೇಳಿಕೆ ನೀಡಿರುವುದು ಬೇಸರ ತರಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ದತ್ತಾ, ಗುರುನಾಥ ಉಳ್ವೇಕರ, ಗಿರೀಶ ರಾವ್, ಅರುಣ ಪಾಟಿಲ್, ಯೋಗಿಶ ಹರಿಕಂತ್ರ, ಶಂಕರ ವಡ್ಡರ, ರಾಜು ವಡ್ಡರ, ರಾಜೇಶ ಶೇಟ್, ಶ್ರೀಧರ ಗುನಗಿ ಇದ್ದರು.