ಶಿರಸಿ: ಶಿಸ್ತು ರಹಿತ ಜೀವನಕ್ರಮ, ಕಲಬೆರಕೆ ಆಹಾರಕ್ರಮ, ಕಲುಷಿತ ವಾತಾವರಣ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಾಮಾನ್ಯ ಕಾಯಿಲೆಯನ್ನಾಗಿಸುತ್ತಿದೆ. ಕ್ಯಾನ್ಸರನ್ನು ಬರದಂತೆ ತಡೆಯುವಲ್ಲಿ ಯೋಗ, ಮುದ್ರೆ ಸಹಕರಿಸಲಿದೆ ಎಂದು ಪತ್ರಕರ್ತೆ, ಕ್ಯಾನ್ಸರ್ ರೋಗಿಗಳ ಆಪ್ತಸಮಾಲೋಚಕಿ ಕೃಷ್ಣಿ ಶಿರೂರ ಹೇಳಿದರು.
ನಗರದ ನೆಮ್ಮದಿ ಕುಟೀರದಲ್ಲಿ ಪ್ರಜ್ವಲ್ ಟ್ರಸ್ಟ್ ಗುರುವಾರ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಬಿಪಿ, ಮಧುಮೇಹವನ್ನು ಒಪ್ಪಿಕೊಂಡಂತೆ ಕ್ಯಾನ್ಸರ್ ಅನ್ನು ಸಕಾರಾತ್ಮಕವಾಗಿ ಸ್ವೀಕರಿಸಿದಲ್ಲಿ ಅದರಿಂದ ಸುಲಭವಾಗಿ ಹೊರಬರಲು ಸಾಧ್ಯ ಎಂದರು.
ಕ್ಯಾನ್ಸರ್ ನಿವಾರಣೆಯಲ್ಲಿ ಮುದ್ರೆಗಳು ಹೇಗೆ ಪರಿಹಾರ ನೀಡಲಿದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಆಯುರ್ವೇದ ವೈದ್ಯ ವಿನಾಯಕ ಹೆಬ್ಬಾರ ಕ್ಯಾನ್ಸರ್ ಹೇಗೆ ಬರಲಿದೆ ಎಂಬುದನ್ನು ವಿವರಿಸಿದರು.
ಲಯನ್ ರವಿ ನಾಯಕ ಕಾರ್ಯಾಗಾರವನ್ನು ಉದ್ಘಾಟಿಸಿದರು. ವಿ.ಪಿ.ಹೆಗಡೆ ಮಾತನಾಡಿದರು. ಪ್ರಜ್ವಲ್ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭವ್ಯಾ ಭಟ್ ಪ್ರಾರ್ಥನಾಗೀತೆ ಹಾಡಿದರು. ಸುಮಾ ಹೆಗಡೆ ನಿರೂಪಿಸಿದರು. ನಯನಾ ಹೆಗಡೆ ವಂದಿಸಿದರು.