ಅಂಕೋಲಾ: ಹಳ್ಳಿಗಾಡು ಜನರ ವಲಸೆ ತಪ್ಪಿಸಿ ಸ್ವಗ್ರಾಮದಲ್ಲೇ ಗೌರವಯುತ ಕೂಲಿಯೊಂದಿಗೆ ವೈಯಕ್ತಿಕ ಕಾಮಗಾರಿ ಸೌಲಭ್ಯ ಒದಗಿಸುವ ಮಹಾತ್ಮಗಾಂಧಿ ನರೇಗಾ ಯೋಜನೆಯ ಕುರಿತು ತಾಲ್ಲೂಕಿನ ಹಾರವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ನಡವಿನಕೇರಿ ಹಾಗೂ ಜನತಾ ಕಾಲೋನಿಯಲ್ಲಿ ಜಿಲ್ಲಾ ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಗೌಡ ಅವರು ಮನೆ ಮನೆಗೆ ಭೇಟಿನೀಡುವ ಮೂಲಕ ಮಾಹಿತಿ ಹಂಚಿಕೆ ಮಾಡಿದರು.
ಗ್ರಾಮೀಣ ಪ್ರದೇಶದ ಜನರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳು ನರೇಗಾ ಯೋಜನೆಯಲ್ಲಿ ಲಭ್ಯ ಇವೆ. ಗ್ರಾಮಸ್ಥರು ಕೂಲಿ ಕೆಲಸಕ್ಕಾಗಿ ಅಲೆದಾಡದೇ ಸ್ವಂತ ಊರಲ್ಲೇ ಗ್ರಾಮ ಪಂಚಾಯತಿಯಿಂದ ನರೇಗಾದಡಿ ನಡೆಯುವ ಕಚ್ಚಾ ರಸ್ತೆ ನಿರ್ಮಾಣ, ಶಾಲಾ ಸಮಗ್ರ ಅಭಿವೃದ್ಧಿ, ಹೊರಗಾಲುವೆ, ಅಮೃತ ಸರೋವರದಂತಹ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ಮಾಡಬಹುದು.
ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ಬಚ್ಚಲು ಗುಂಡಿ, ಕೋಳಿ ಶೆಡ್, ಪೌಷ್ಟಿಕ ಕೈತೋಟ, ದನದ ಕೊಟ್ಟಿಗೆ, ವೈಯಕ್ತಿಕ ಹಾಗೂ ಕೃಷಿ ಬಾವಿ, ಬಯೋಗ್ಯಾಸ್ ಘಟಕ ನಿರ್ಮಾಣ, ಅಡಿಕೆ ತೋಟ ಸೇರಿದಂತೆ ವಿವಿಧ ಕಾಮಗಾರಿ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಲು ಅವಕಾಶವಿದೆ. ಈ ಬಗ್ಗೆ ಗ್ರಾಮ ಪಂಚಾಯತಿಗೆ ಭೇಟಿನೀಡಿ ಬೇಡಿಕೆ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು. ಈ ವೇಳೆ ವಾಟರ್ಮನ್ ಅಶೋಕ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.